ಜಿಲ್ಲೆ

ಅಕ್ಷರ ದೋಸೆ ಮೂಲಕ ಮತ ಜಾಗೃತಿ ವೋಟ್ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಿ

ಡಿ. ಎಂ. ಮಹೇಶ್

ದಾವಣಗೆರೆ: ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಗುರುವಾರ ಸಂಜೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಅಕ್ಷರ ದೋಸೆ ಪರಿಕಲ್ಪನೆಯಡಿ ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಜಯದೇವ ವೃತ್ತದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹಾಗೂ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ದೋಸೆ ಹೆಂಚುಗಳ ಮೇಲೆ ‘ನಮ್ಮ ಮತ ನಮ್ಮ ಹಕ್ಕು’, ‘ಮೈ ವೋಟ್ ಮೈ ವಾಯ್ಸ’.. ಎಂಬ ಬರಹದ ದೋಸೆ ಹುಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್, ನಾವೆಲ್ಲರೂ ಭಾರತ ದೇಶದ ಪ್ರಬುದ್ಧ ನಾಗರಿಕರು. ಸಂವಿಧಾನವು ನಮಗೆ ಮತದಾನದ ಹಕ್ಕನ್ನು ನೀಡಿದೆ. ಪ್ರತಿಯೊಂದು ಮತವೂ ಶಕ್ತಿಶಾಲಿಯಾಗಿದೆ. ಎಲ್ಲರೂ ಮೇ 7ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮತದಾನ ನಮ್ಮ ಹಕ್ಕು. ಮತದಾನ ದಿನದಂದು ಮತದಾರರ ಗುರ್ತಿನ ಚೀಟಿ, ಆಧಾರ್ ಅಥವಾ ಇತರೆ ದಾಖಲೆಗಳೊಂದಿಗೆ ಹಾಜರಾಗಿ ಮತ ಚಲಾಯಿಸಿ. ನಗರ ಪ್ರದೇಶದಲ್ಲಿ ವೋಟರ್ ಸ್ಲಿಪ್ ನೀಡಲಾಗುತ್ತಿದ್ದು ಇದರಲ್ಲಿ ಬಾರ್ ಕೋಡ್ ವ್ಯವಸ್ಥೆ ಸ್ಕಾೃನ್ ಮಾಡಿದರೆ ಮತಗಟ್ಟೆ ತಲುಪಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಯೋಜನಾಧಿಕಾರಿ ಮಲ್ಲಾನಾಯ್ಕ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಸುಂಕದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ವಯಸ್ಕರ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಹೇಶ್ ದೊಡ್ಮನಿ ಇತರರಿದ್ದರು.