ದಾವಣಗೆರೆ: ನಿಮ್ಮಿಂದ ಆಗದು ಎಂಬ ಋಣಾತ್ಮಕ ಭಾವನೆಯನ್ನು ಪಾಲಕರು ಮಕ್ಕಳಲ್ಲಿ ಬಿತ್ತಬಾರದು. ಅವರ ಸಾಮರ್ಥ್ಯ ಗುರುತಿಸಿ ಸಾಧನೆಗೆ ಪ್ರೇರಣೆ ನೀಡಬೇಕು ಎಂದು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ಡಾ.ರವಿ ತಿರ್ಲಾಪುರ ಹೇಳಿದರು.
ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಪಡೆದ ಸಂಘದ ಷೇರುದಾರ ಸದಸ್ಯರ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ಅಂಕ ಗಳಿಸಬೇಕಾದರೆ ಸತತ ಪರಿಶ್ರಮ, ಪ್ರಯತ್ನ ಬೇಕು. ಸರಿಯಾಗಿ ಓದದಿದ್ದರೆ ಕನ್ನಡವೂ ಸಹ ಕಷ್ಟ ಆಗಲಿದೆ. ನಮ್ಮಿಂದ ಇದು ಅಸಾಧ್ಯವೆಂಬ ಋಣಾತ್ಮಕ ಮನೋಭಾವದಿಂದ ಹೊರಬಂದು, ಸಕಾರಾತ್ಮಕ ಚಿಂತನೆಯೊಂದಿಗೆ ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಿ ಎಂದು ಹೇಳಿದರು.
ಸನ್ಮಾನಕ್ಕೆ ಪಾತ್ರರಾದ ಮಕ್ಕಳು ಯಶಸ್ಸಿನ ಅಮಲಿನಲ್ಲಿ ತೇಲಬಾರದು. ಸಾಧಿಸುವುದು ಸಾಕಷ್ಟಿದೆ ಎಂಬುದನ್ನು ಅರಿತು, ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನಾವೀನ್ಯತೆಯೊಂದಿಗೆ ಹೆಚ್ಚಿನ ಸಾಧನೆಯತ್ತ ಮುಖ ಮಾಡಬೇಕು. ಅನುಭಾವದ ಮೂಸೆಯಿಂದ ಹೆತ್ತವರು ಹೇಳಿಕೊಡುವ ಜೀವನ ಕೌಶಲದ ಪಾಠ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಘಟನೆ ಕಟ್ಟುವುದು ಸುಲಭವಲ್ಲ. ಕಟ್ಟಿದ್ದನ್ನು ಉಳಿಸಿ, ಬೆಳೆಸುವುದು ಇನ್ನೂ ಕಷ್ಟದ ಕೆಲಸವಾಗಿದೆ. ಜನರು ನಮ್ಮನ್ನು ಗುರುತಿಸಬೇಕಾದರೆ ಸಂಖ್ಯೆ ಬೇಕು. ಅದು ಇದ್ದಾಗ ಪವರ್ ಬರಲಿದೆ. ಸಂಖ್ಯೆಯಲ್ಲಿ ಬಹುಮತ ಇದ್ದವರು ಆಳುತ್ತಾರೆ. ಇದನ್ನು ಅರಿತು ವೀರಶೈವ-ಲಿಂಗಾಯತರರು ಸಂಘಟಿತರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಮಾತನಾಡಿ, ಸಂಘಟನೆಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯವಿದೆ. ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಜತೆಯಲ್ಲೇ ಸಂಘಟನೆ, ಏಕತೆ ಬಗ್ಗೆ ತಿಳಿ ಹೇಳುವುದು ಗಮನಾರ್ಹ ಎಂದರು.
ಜೀವನದಲ್ಲಿ ಅಂಕ ಗಳಿಕೆಯೇ ಮುಖ್ಯವಲ್ಲ. ಅದಕ್ಕೂ ಮೀಗಿಲಾದ ಜೀವನ ಇದೆ. ಅಂಕಕ್ಕೆ ಸೀಮಿತವಾದರೆ ಮಕ್ಕಳು ಪುಸ್ತಕದ ಹುಳು ಆಗುವ ಅಪಾಯವಿದೆ. ಆದ್ದರಿಂದ ಪಾಲಕರು ಮಕ್ಕಳಲ್ಲಿ ಜೀವನ ಕೌಶಲ, ನೈತಿಕ ಮೌಲ್ಯ ಬೆಳೆಸಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾನ್ವಿತ 61 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಲೋಕಣ್ಣ ಮಾಗೋಡ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸರ್ಕಾರಿ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎನ್. ಒಡೇನಪುರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಜಿ.ಸಿ. ರಾಘವೇಂದ್ರ ಪ್ರಸಾದ್, ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ.ಶಿವಶಂಕರ್, ಎನ್.ಇ. ನಟರಾಜ್, ಬಿ. ಪಾಲಾಕ್ಷಿ ಇತರರಿದ್ದರು.
----