ಜಿಲ್ಲೆ

ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಹೋರಾಟ ರೂಪಿಸಿ  ಮಹಲಿಂಗ ರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ ಪ್ರದಾನ

ಡಿ. ಎಂ. ಮಹೇಶ್

ದಾವಣಗೆರೆ: ಸರ್ಕಾರ ಈ ಹಿಂದೆ ಘೋಷಣೆ ಮಾಡಿದಂತೆ ಮಧ್ಯ ಕರ್ನಾಟಕದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಬೇಕಿತ್ತು. ಇದುವರೆಗೆ ಆಗಿಲ್ಲ. ಪ್ರಭುತ್ವ ಕೇಳದಿದ್ದರೆ ಪ್ರತಿಭಟನೆ ನಡೆಸಿ ಒತ್ತಡ ಹಾಕಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಗೌರಮ್ಮ ಪಿ. ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್  ಸ್ಥಾಪಿತ ಮಹಲಿಂಗ ರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಚ್ಚಕನ್ನಡದ ಊರು ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಹಾಗೂ ಇಲ್ಲಿ ಬರುವ ಸಾಹಿತಿಗಳಿಗೆ ಬೆಣ್ಣೆ ದೋಸೆ ಉಪಚಾರ ನೀಡಲು ಜನ ಕಾತರರಾಗಿದ್ದಾರೆ. ಸರ್ಕಾರದ ಭಾಗವಾದ ಜನಪ್ರತಿನಿಧಿಗಳು ಇಲ್ಲಿದ್ದಾರೆ. ಆದರೆ ಸರ್ಕಾರ ಮೌನ ತಾಳಿದೆ. ಹೀಗಾಗಿ ಇಲ್ಲಿನ ಜನರು, ಸಾಹಿತಿಗಳು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮೂಲಕ ಒತ್ತಡ ತರುವ ಕೆಲಸ ಮಾಡಬೇಕು ಎಂದು ಹೇಳಿದರು.
ಕ್ರಾಂತಿಗೆ ದಾವಣಗೆರೆ ಹೇಳಿ ಮಾಡಿಸಿದ ಸ್ಥಳ. ಎಲ್ಲ ಬದಲಾವಣೆಗೆ ಇಲ್ಲಿಂದ ಅವಕಾಶವಿದೆ. ವಿಶಿಷ್ಟ ಕನ್ನಡದ ಈ ಊರಲ್ಲಿ ಪ್ರೀತಿಯಿಂದ ಬೈಯ್ಯುವ ಬೈಗುಳವೂ ಚೆಂದ. ಹಾಗಾಗಿ ಈ ನೆಲದಲ್ಲಿ ಸಮ್ಮೇಳನ ನಡೆದು, ಇಲ್ಲಿನ ನೆಲ ಸಚೇತನ ಆಗಬೇಕು ಎಂದು ಆಶಿಸಿದರು.
ದಾವಣಗೆರೆಯಲ್ಲಿ ಶ್ರೀಮಂತರು ಹೆಚ್ಚಿದ್ದಾರೆ. ನೂರು ಮಂದಿ ಕೋಟ್ಯಧೀಶರು ಇರಬಹುದು. ಅವರೆಲ್ಲ ಇಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉದಾರ ಕೊಡುಗೆ ನೀಡಬೇಕು. ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಅವರ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಲು ಮುಂದೆ ಬರಬೇಕು ಎಂದೂ ಆಗ್ರಹಿಸಿದರು.
ಹರಿಹರದಲ್ಲಿ ಆಗಿದ್ದ ಜಿಲ್ಲಾ ಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ನವೀಕೃತ ಸ್ಮರಣ ಸಂಚಿಕೆಯನ್ನು ಇದೇ ವೇಳೆ ಬಿಡುಗಡೆ ಮಾಡಿದರು.
ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮಾತನಾಡಿ, ಮಲ್ಲಿಕಾರ್ಜುನ ಕಡಕೋಳ ಅವರ ಪ್ರಯತ್ನದಿಂದಾಗಿ ದಾವಣಗೆರೆಗೆ ವೃತ್ತಿ ರಂಗಭೂಮಿ ರಂಗಾಯಣ ಬರಲು ಸಾಧ್ಯವಾಗಿದೆ.
ಸಿದ್ದರಾಮಯ್ಯ ಈ ಹಿಂದೆ ಸಿಎಂ ಇದ್ದಾಗ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಅವರೊಂದಿಗೆ ಸಲ್ಲಿಸಿದ್ದ ಮನವಿಗೆ ತಕ್ಷಣವೇ ಅನುಮೋದನೆ ಸಿಕ್ಕಿತು. ದಾವಣಗೆರೆಗೆ ಬಂದಿದ್ದ ರಂಗಕರ್ಮಿ ಬಿ.ವಿ. ಕಾರಂತ್, ಕೊಂಡಜ್ಜಿ ಗುಡ್ಡ ನೋಡಿ ಇಲ್ಲೊಂದು ರಂಗಾಯಣ ಮಾಡಬೇಕು ಎಂದು ಬಯಸಿದ್ದರಾದರೂ ಅದು ಮೈಸೂರಿಗೆ ಹೋಯಿತು. ಈಗ ವೃತ್ತಿ ರಂಗಭೂಮಿ ರಂಗಾಯಣ ಆಗಿದೆ ಎಂದು ತಿಳಿಸಿದರು.
ಮಹಲಿಂಗರಂಗ ಪ್ರಶಸ್ತಿ ಸ್ವೀಕರಿಸಿದ ಲೇಖಕ ಮಲ್ಲಿಕಾರ್ಜನ ಕಡಕೋಳ ಮಾತನಾಡಿ, ದಾವಣಗೆರೆಯಲ್ಲಿ ಮಾಡಿದ ಸಾಹಿತ್ಯ ಕೃಷಿ, ಆರೋಗ್ಯ ಇಲಾಖೆ ಸೇವೆಯನ್ನು ಸ್ಮರಿಸಿದರು. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಗೌರಮ್ಮ ಮೋತಿ ಪಿ. ರಾಮರಾವ್ ಚಾರಿಟಬಲ್ ಟ್ರಸ್ಟ್‌ನ ಸಂಚಾಲಕ ಸುಬ್ರಹ್ಮಣ್ಯ, ಸಾಹಿತಿಗಳಾದ ಪ್ರೊ. ಸಿ.ವಿ. ಪಾಟೀಲ್, ಎನ್.ಟಿ. ಎರ‌್ರಿಸ್ವಾಮಿ ಇತರರಿದ್ದರು.
ಜಯಪ್ರಕಾಶ್ ಅಗಸನಕಟ್ಟೆ, ಜಿ.ಸಿ.ಮಂಗಳಾ, ಕೆ. ಪಂಚಾಕ್ಷರಿ, ಕೆ.ಟಿ.ಗೀತಾ, ಹೊದಿಗೆರೆ ಪ್ರಭಾಕರ್, ಸುನೀತಾ ರಾಜು, ನಾಗೇಶ ಶಾಸ್ತ್ರಿ, ಕಾಟಮ್ಮ, ಚಂದ್ರಶೇಖರಾಚಾರಿ, ಎ.ಸಿ. ಚಂದ್ರಕಲಾ, ಪುರವಂತರ ಪರಮೇಶ್ವರಪ್ಪ, ಸಿದ್ದಮ್ಮ ಭುವನೇಶ್ವರಪ್ಪ ಅವರಿಗೆ ಗ್ರಾಮೀಣ ಸಿರಿ ಪ್ರಶಸ್ತಿ ಹಾಗೂ ಎಚ್. ಶಶಿಧರ, ಶೋಭಾ ರಂಗನಾಥ ಅವರಿಗೆ ನಗರ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.