ದಾವಣಗೆರೆ: ಜಯದೇವ ಜಗದ್ಗುರುಗಳು ರಾಜ್ಯದ ವಿವಿಧೆಡೆ ಸ್ಥಾಪಿಸಿದ್ದ ಉಚಿತ ಪ್ರಸಾದ ನಿಲಯಗಳು ಇಂದು ಶತಮಾನೋತ್ಸವ ಆಚರಿಸಿಕೊಂಡಿವೆ. ಈ ಸತ್ಕಾರ್ಯದಿಂದಾಗಿ ದೇಶದಲ್ಲಿ ಸಾಕ್ಷರರ ಸಂಖ್ಯೆ ಹೆಚ್ಚಳವಾಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಶಿವಯೋಗಾಶ್ರಮದಲ್ಲಿ ಲಿಂ. ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 68 ನೇ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ, ಶ್ರೀ ಜಯದೇವ ಲೀಲೆ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದಾವಣಗೆರೆಯಲ್ಲಿ ಮೊಟ್ಟ ಮೊದಲ ಜಯದೇವ ಪ್ರಸಾದ ನಿಲಯ 1906 ರಲ್ಲಿ ಪ್ರಾರಂಭವಾಯಿತು. ಚಿತ್ರದುರ್ಗ , ಬೆಂಗಳೂರು , ತುಮಕೂರು, ತಿಪಟೂರು ಇನ್ನೂ ಮುಂತಾದೆಡೆ ಪ್ರಸಾದನಿಲಯಗಳನ್ನು ತೆರೆದರು. ಜಿ.ಎಸ್.ಶಿವರುದ್ರಪ್ಪ , ಸಂಶೋಧಕ ಎಂ.ಚಿದಾನಂದಮೂರ್ತಿ , ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ , ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ , ಕವಿ ಚನ್ನವೀರ ಕಣವಿ , ಮಾಜಿ ಸಚಿವ ಎಚ್.ಶಿವಪ್ಪ, ಕೊಂಡಜ್ಜಿ ಬಸಪ್ಪ ಮುಂತಾದವರು ಇಲ್ಲಿ ಓದಿ ನಾಡಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು.
ಜಯದೇವ ಜಗದ್ಗುರುಗಳು ಲಿಂಗಾಯತ ಜನಾಂಗಕ್ಕೆ ಸೀಮಿತರಾಗದೆ ಮುಸ್ಲಿಮರು, ಹಿಂದುಳಿದ ಸಮಾಜದವರಿಗೆ ಧನಸಹಾಯ ಮಾಡಿದರು. ಎಲ್ಲರನ್ನೂ ಉದ್ಧಾರ ಮಾಡಿದ ಯುಗಪುರುಷರು. 1938ರ ಅವಧಿವರೆಗೆ ಮುರುಘಾಮಠದಿಂದ ಶ್ರೀಗಳು 18 ಲಕ್ಷ ರೂ.ಗಳ ದಾನ ಮಾಡಿದ್ದನ್ನು, ಶ್ರೀಗಳನ್ನು ಮೈಸೂರು ಅರಮನೆಯಲ್ಲಿ ಗೌರವಿಸಿದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಉದ್ಗರಿಸಿದ್ದರು ಎಂದು ಸ್ಮರಿಸಿದರು.
ರೂಪ, ರೂಪಾಯಿಗಿಂತಲೂ ನಾವು ಮಾಡುವ ಕಾರ್ಯಗಳು ಸದಾಕಾಲ ಚಿರಾಯುವಾಗಿ ಉಳಿಯಲಿವೆ. ಅದರಂತೆ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಅಸಮಾನತೆ, ಅಸ್ಪೃಶ್ಯತೆ , ಅನಕ್ಷರತೆ ,ಬಡತನ , ಹಸಿವು,ನಿರುದ್ಯೋಗ ಎಂಬ ಕತ್ತಲನ್ನು ಹೊಡೆದೊಡಿಸಲು ಜ್ಞಾನ ಸೂರ್ಯರಾಗಿ ಬಂದ ಜಯದೇವ ಶ್ರೀಗಳು ಶಿಕ್ಷಣ ಕ್ರಾಂತಿ ಮಾಡಿದರು ಎಂದರು.
ಪ್ರವಚನ ನಡೆಸಿಕೊಟ್ಟ ಸಂತೆಬೆನ್ನೂರಿನ ಮಹಾಂತೇಶ ಶಾಸ್ತ್ರಿ, ಜಯದೇವ ಶ್ರೀಗಳು ಕಡುಬಡತನದಲ್ಲಿ ಹುಟ್ಟಿದರೂ ಸಮಾಜಕ್ಕಾಗಿ ದುಡಿದರು. ಲಕ್ಷಾಂತರ ರೂ. ಸಾಲದಲ್ಲಿದ್ದ ಮುರುಘಾ ಮಠವನ್ನು ರಾಜ್ಯಾದ್ಯಂತ ಸಂಚಾರ ಮಾಡಿ ಶ್ರೀಮಂತಗೊಳಿಸಿದರು. ಮಾನವರು ಹೇಗೆ ಬದುಕಬೇಕು ಎಂಬುದಕ್ಕೆ ಅವರು ದಿಕ್ಸೂಚಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಎ.ನಾಗರಾಜ್, ಶಿವಯೋಗಾಶ್ರಮ ಸಮಿತಿ ಸದಸ್ಯರಾದ ಎಂ.ಜಯಕುಮಾರ್, ಅಂದನೂರು ಮುಪ್ಪಣ್ಣ , ಕಣಕುಪ್ಪಿ ಮುರುಗೇಶಪ್ಪ , ಎಸ್.ಓಂಕಾರಪ್ಪ , ಲಂಬಿ ಮುರುಗೇಶಪ್ಪ , ಟಿ.ಮಹಾಲಿಂಗೇಶ್ವರ , ಎಸ್.ಜಿ.ಸಂಗಪ್ಪ , ಕುಂಟೋಜಿ ಚನ್ನಪ್ಪ , ವಿಭೂತಿ ಬಸವಾನಂದ ಶರಣರು ಇತರರಿದ್ದರು.