ದಾವಣಗೆರೆ :ಜನರನ್ನು ಗುಲಾಮಗಿರಿಯ ಬಂಧನದಿಂದ ಮುಕ್ತಗೊಳಿಸಿ ಮಹಾತ್ಮರನ್ನಾಗಿ ಮಾಡಿದ ಕಾರಣಕ್ಕೆ ಬಸವಣ್ಣನವರು ವಿಶ್ವಮಾನ್ಯರಾದರು ಎಂದು ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ವಿರಕ್ತಮಠದಲ್ಲಿ ಹಮ್ಮಿಕೊಂಡಿರುವ, ಕಲ್ಯಾಣದಿಂದ ಉಳವಿಯಡೆಗೆ-114ನೇ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಸಾವಿರಾರು ವರ್ಷಗಳಿಂದ ಎಲ್ಲಾ ದೇಶದಲ್ಲಿಯೂ ಜೀತ ಪದ್ಧತಿ, ಗುಲಾಮಗಿರಿ ವ್ಯವಸ್ಥೆ ಇತ್ತು. ರಾಜ ಮಹಾರಾಜರು ಹಲವಾರು ಸಮುದಾಯದ ಜನರನ್ನು ದುಡಿಸಿಯೂ ಸೌಲಭ್ಯಗಳನ್ನು ಕೊಡುತ್ತಿರಲಿಲ್ಲ. ದೈಹಿಕ,ಮಾನಸಿಕವಾಗಿ ಗುಲಾಮಗಿರಿತನಕ್ಕೆ ಒಡ್ಡಲಾಗುತ್ತಿತ್ತು. ಇದರಿಂದ ಹೊರತಂದವರೇ ವಿಶ್ವಗುರು ಬಸವಣ್ಣನವರು ಎಂದು ಸ್ಮರಿಸಿದರು.
ಹನ್ನೆಡನೇ ಶತಮಾನದಲ್ಲಿ ಇಂತಹ ಬಂಧನಗಳಿಂದ ಜನಸಾಮಾನ್ಯರನ್ನು ಬಂಧಮುಕ್ತಗೊಳಿಸಿ ಅರಿವು, ಆಚಾರ ಕಲಿಸಿದರು. ವಿವೇಕ ತುಂಬಿ ಶರಣರನ್ನಾಗಿ ಮಾಡಿದರು. ದೈಹಿಕ ಗುಲಾಮಗಿರಿಗಿಂತಲೂ ಮಾನಸಿಕ ಗುಲಾಮಗಿರಿ ಬಹಳ ಅಪಾಯಕಾರಿಯಾಗಿದೆ. ಇಂತಹ ದೈಹಿಕ ಮಾನಸಿಕ ಜೀತಗಾರಿಕೆಯಿಂದ ಹೊರತರುವಲ್ಲಿ ಬಸವಣ್ಣ ಶ್ರಮಿಸಿದರು ಎಂದರು.
ಬಸವಣ್ಣನವರು ಅಜ್ಞಾನದ ಕಳೆ ಕಳೆದು ಸತ್ಯ ಧರ್ಮದ ಬೆಳೆಯನ್ನು ಬೆಳೆಸಿದರು. ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡರು. ಅಂತಹ ಪುಣ್ಯಾತ್ಮರು ದೇವರ ಸ್ವರೂಪದಲ್ಲಿ ಈ ಧರೆಗೆ ಅವತರಿಸಿ ಅರಿವು ಪ್ರಜ್ಞೆ ಜಾಗೃತಿಗೊಳಿಸಿ, ಪ್ರಜ್ಞಾವಂತ ಸಮಾಜವನ್ನು ನಿರ್ಮಾಣ ಮಾಡಿದರು.
ಸತ್ಯ ಶುದ್ಧ ಕಾಯಕವನ್ನು ಪರಿಚಯಿಸಿ, ಆತ್ಮ ಶುದ್ಧಿಗಾಗಿ ಶಿವಯೋಗವನ್ನು, ಜೀವನ ಮುಕ್ತಿಗಾಗಿ ದಾಸೋಹವನ್ನು ಕರುಣಿಸಿದರು. ಯಾವ ಲೋಕದಲ್ಲೂ ಯಾವ ಸಮಾಜದಲ್ಲೂ ಇಲ್ಲದೇ ಇರುವ ಸ್ತ್ರೀ ಕುಲಕ್ಕೂ ಸಂಸ್ಕಾರ ನೀಡಿ ಪುರುಷ ಸಮಾನವಾಗಿ ಸ್ತ್ರೀಯರು ಕೂಡ ದೈವತ್ವವನ್ನು ವಂದಬಹುದು ಎಂದು ತೋರಿಸಿಕೊಟ್ಟರು ಎಂದು ಹೇಳಿದರು.
---