ದಾವಣಗೆರೆ: ಸಾಧನೆ ಮತ್ತು ಉತ್ತಮ ಮನಸ್ಸಿಗೆ ಆರೋಗ್ಯ ಮತ್ತು ಆಧ್ಯಾತ್ಮದ ಒಲವು ಮುಖ್ಯ. ಇಂದಿನ ಮಕ್ಕಳಲ್ಲಿ ಆಧ್ಯಾತ್ಮದ ಪ್ರವೃತ್ತಿ ಬೆಳೆಸಬೇಕು ಎಂದು ಸಾಹಿತಿ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.
ಇಲ್ಲಿನ ಸದ್ಯೋಜಾತ ಹಿರೇಮಠದಲ್ಲಿ ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ 38ನೇ ವರ್ಷದ ಸ್ಮರಣೋತ್ಸವ ಮತ್ತು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ 13ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ, ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದರು.
ಆರೋಗ್ಯ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು. ಆರೋಗ್ಯವಿದ್ದವರು ಸಾಧನೆ ಮಾಡಬಲ್ಲರು. ಆಧ್ಯಾತ್ಮದ ಸಂಗ ಮಾಡಿದವರು ತಾವಿದ್ದಲ್ಲಿಯೇ ಕೈಲಾಸ ಸೃಷ್ಟಿಸುವರು. ಆಧ್ಯಾತ್ಮದ ಒಲವಿಲ್ಲದವರಲ್ಲಿ ರಾಕ್ಷಸಿ ಗುಣಗಳು ಕಾಣಿಸಲಿವೆ ಎಂದು ವಿಶ್ಲೇಷಿಸಿದರು.
ಅರಿಷಡ್ವರ್ಗಗಳಿಂದ ದೂರವಿದ್ದವರು ಆರೋಗ್ಯ ಹೊಂದಬಹುದು. ಸಿಕ್ಸ್‌ಪ್ಯಾಕ್‌ಗಾಗಿ 3 ಕೋಟಿ ರೂ. ವ್ಯಯಿಸಿ 30 ವರ್ಷಕ್ಕೇ ಸಾವಿಗೀಡಾಗುತ್ತಿದ್ದಾರೆ. ಕಾಮ ವಿಕಾರದಿಂದಾಗಿ ರಾಜ್ಯದಲ್ಲಿ 65 ಸಾವಿರ ಜನರು ಎಚ್‌ಐವಿಗೆ ತುತ್ತಾಗಿದ್ದಾರೆ. ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ ಈ ಆರರಿಂದಲೂ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಕೋಪ ಹೆಚ್ಚಿದಂತೆ ಹೃದಯದ ದಮನಿಗಳು ಸಾಮರ್ಥ್ಯ ಕಳೆದುಕೊಳ್ಳಲಿವೆ. ರಕ್ತನಾಳಗಳು ಸಂಕುಚಿತವಾಗಲಿವೆ. ಬಿಪಿ, ರಕ್ತದೊತ್ತಡ ಹೆಚ್ಚಲಿದೆ. ತಂಬಾಕು, ಮದ್ಯಪಾನ ಹಾಗೂ ಮಾದಕ ವಸ್ತುಗಳ ಮೋಹದಿಂದ ಯುವಕರ ಮರಣ ಹೆಚ್ಚಿದೆ. ಆಧ್ಯಾತ್ಮದ ಅರಿವಿಲ್ಲದವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಲ್ಲರು ಎಂದರು.
ಒಂದು ಸಿಗರೇಟು 6 ದಿನದ ಆಯಸ್ಸನ್ನು ಕಡಿಮೆ ಮಾಡಲಿದೆ. ಸಿಗರೇಟಿನ ಪ್ಯಾಕ್‌ಗೆ ಬಳಸುತ್ತಿರುವ 7 ಸಾವಿರ ಬಿಲಿಯನ್ ಪೇಪರ್ ಅನ್ನು ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡಬಹುದು. ಇಂದು ಬ್ಯಾಂಕ್‌ಗಳೂ ಸಾಲದಾಗಿ ಪೈಪ್‌ಗಳಲ್ಲಿಯೂ ಹಣವನ್ನು ಕೂಡಿಡುವ ಲೋಭ ಅತಿರೇಕವಾದುದು ಎಂದು ಹೇಳಿದರು.
ಸತ್ಯಶುದ್ಧ ಕಾಯಕ ಮಾಡಿ ದಾಸೋಹ ಮಾಡುವವರು ಆರೋಗ್ಯವಾಗಿರಬಹುದು. ಕೂತಲ್ಲೇ ಮಿತಿಮೀರಿ ತಿನ್ನುವವರಲ್ಲಿ ಸ್ಥೂಲ ಕಾಯ, ಹೃದಯಾಘಾತ ಸೇರಿ ಅನೇಕ ರೋಗಗಳ ಆಹ್ವಾನವಾಗಲಿದೆ. ಚಿಂತೆ ದೂರವಿಟ್ಟರೆ ಬಾಳು ಬಂಗಾರ ಆಗಲಿದೆ. ಉತ್ತಮ ಚಾರಿತ್ರೃಕ್ಕೆ ಆಧ್ಯಾತ್ಮದ ಅರಿವೂ ಬೇಕು. ದುರಭ್ಯಾಸ ಮತ್ತು ದುರುಳರಿಂದ ದೂರವಿರಲು ಯೋಗ-ಧ್ಯಾನ ಅವಶ್ಯಕ ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಸಹಕಾರಿ ಧುರೀಣ ಎನ್.ಎ.ಮುರುಗೇಶ್, ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಧಾರ್ಮಿಕ ಸೇವೆ, ಜನಜಾಗೃತಿ ಜತೆಗೆ ಶಿಕ್ಷಣ ಹಾಗೂ ಸಮಾಜಮುಖಿಯಾಗಿ ಕೆಲಸ ಮಾಡಿದರು. ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾಗಿದ್ದರು. ನಾಡಿ ಶಾಸ್ತ್ರ ಅರಿತಿದ್ದರು. ಉಮಾಪತಿ ಪಂಡಿತಾರಾಧ್ಯರು ಸಹ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊನ್ನಾಳಿಯ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀ, ಜೈನಾಪುರದ ರೇಣುಕ ಶಿವಾಚಾರ್ಯ ಶ್ರೀ, ತೊಗರ್ಸಿಯ ಗುರುಬಸವ ಮಹಾಂತ ಶಿವಾಚಾರ್ಯ ಶೀ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸಿದ್ದರು. ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ, ಬಾ.ಮಾ.ಬಸವರಾಜಯ್ಯ ಇತರರಿದ್ದರು. ರಾಧೇಶ ಜಂಬಗಿ ಸ್ವಾಗತಿಸಿದರು. ಶಿವಯೋಗಿ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.