ದಾವಣಗೆರೆ: ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್‌ಗಿಂತಲೂ ಅಧಿಕ ನೀರು ಹರಿಯುತ್ತಿದೆ. ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ ಇರುವುದರಿಂದ ಯಾವುದೇ ಕ್ಷಣದಲ್ಲಿ ನದಿಯಲ್ಲಿನ ನೀರಿನ ಪ್ರಮಾಣ ಏರಿಕೆಯಾಗಲಿದ್ದು ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ತುಂಗಾ ಜಲಾಶಯದಿಂದ 74105 ಕ್ಯೂಸೆಕ್ ನೀರು ತುಂಗಭದ್ರಾ ನದಿಯಲ್ಲಿ ಹರಿಯುತ್ತಿದೆ. ಭದ್ರಾ ಡ್ಯಾಂ ಭರ್ತಿಯಾಗಲು 5 ಅಡಿ ಬಾಕಿ ಇದ್ದು 35557 ಕ್ಯೂಸೆಕ್ ಒಳಹರಿವು ಇದೆ. ಮತ್ತು ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ನೀರಿನ ಒಳಹರಿವು ಹೆಚ್ಚಳದಿಂದ ಡ್ಯಾಂ ಭರ್ತಿಯಾಗಬಹುದು. ನದಿಪಾತ್ರದ ಜನರು ತಮ್ಮ ಆಸ್ತಿ, ಜಾನುವಾರುಗಳ ರಕ್ಷಣೆಗೆ ಗಮನ ಹರಿಸಬೇಕು.
ತುಂಗಾದಿಂದ ನೀರು ಬರುತ್ತಿದ್ದು ಭದ್ರಾ ತುಂಬಿದ ನಂತರ ನದಿಯಲ್ಲಿನ ನೀರನ ಪ್ರಮಾಣ ಗಣನೀಯವಾಗಿ ಹೆಚ್ಚಲಿದ್ದು ಇದರಿಂದ ನದಿಯಲ್ಲಿನ ನೀರು ಅಪಾಯ ಮಟ್ಟದಲ್ಲಿರುತ್ತದೆ. ಇದರಿಂದ ಹೊನ್ನಾಳಿ, ನ್ಯಾಮತಿ, ಹರಿಹರ ತಾಲೂಕುಗಳಲ್ಲಿನ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಬಹುದು. ಹೊನ್ನಾಳಿಯ ನದಿ ತೀರದ ಬಾಲರಾಜ್‌ಘಾಟ್ ಪ್ರದೇಶದ 11 ಕುಟುಂಬದ 64 ಜನರನ್ನು ಅಂಬೇಡ್ಕರ್ ಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ನದಿ ಪಾತ್ರದಲ್ಲಿನ ಎಲ್ಲಾ ಗ್ರಾಮಗಳಲ್ಲಿ ಜನ, ಜಾನುವಾರುಗಳನ್ನು ನದಿಗೆ ಇಳಿಯದಂತೆ ಎಚ್ಚರ ವಹಿಸಲು ಜಾಗೃತಿ ಮೂಡಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿ ರಚಿಸಲಾಗಿದೆ. ಮತ್ತು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್
ಮತ್ತು ತುರ್ತು ನಿಗಾ ಘಟಕಗಳನ್ನು ಸನ್ನದ್ಧವಿಡಲಾಗಿದೆ. ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ 08192-234034, 1077, ಎಸ್‌ಡಿಆರ್‌ಎಫ್ ಘಟಕ, ದೇವರಬೆಳಕೆರೆ 7411308591, ದಾವಣಗೆರೆ ಅಗ್ನಿಶಾಮಕ ಇಲಾಖೆ 08192-258101, 112, ದಾವಣಗೆರೆ ಮಹಾನಗರ ಪಾಲಿಕೆ 08192-234444, 8277234444, ದಾವಣಗೆರೆ ತಾ. ಕಚೇರಿ 9036396101, ಹರಿಹರ 08192-272959, ಜಗಳೂರು 08196-227242, ಹೊನ್ನಾಳಿ 08188-252108, ನ್ಯಾಮತಿ 8073951245, ಚನ್ನಗಿರಿ 7892481962 ದೂರವಾಣಿ, ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಡಿಸಿ ತಿಳಿಸಿದ್ದಾರೆ.
----