ದಾವಣಗೆರೆ: ಎಂಬತ್ತರ ದಶಕದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ದಲಿತ ಸಂಘಟನೆಗಳು ವಿಘಟನೆಗೊಂಡಿವೆ. ಅವನ್ನು ಪುನಶ್ಚೇತನಗೊಳಿಸುವ ಅಗತ್ಯ ಇಂದಿದೆ ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯಾಧ್ಯಕ್ಷ ಡಾ.ಜನಾರ್ಧನ್ ಹೇಳಿದರು.
ನಗರದ ಪಂಪಾಪತಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
1920 ಕ್ಕಿಂತ ಮೊದಲಿನಿಂದಲೂ ದಲಿತ ಹಕ್ಕುಗಳಿಗಾಗಿ ಸಿಪಿಐ ಹೋರಾಟ ಮಾಡುತ್ತಾ ಬಂದಿದೆ. ಕೆಲವರು ಇದರ ದಿಕ್ಕು ತಪ್ಪಿಸಲು ಅಪಪ್ರಚಾರ ಮಾಡುವವರಿದ್ದಾರೆ. ಶೋಷಿತ ಸಮುದಾಯದ ಮಧ್ಯೆ ಸಿಪಿಐ ನಿರಂತರ ಹೋರಾಟ ನಡೆಸಿದೆ ಎಂದು ತಿಳಿಸಿದರು.
ಜಾತೀಯತೆ ಹೆಸರಿನಲ್ಲಿ ಇಂದಿಗೂ ಅತ್ಯಂತ ಶೋಷಣೆಗೆ ಒಳಗಾಗಿರುವವರು ದಲಿತರು. ದಲಿತ ಮಹಿಳೆಯರನ್ನು ತುಂಬಾ ಕೀಳಾಗಿ ಕಾಣಲಾಗುತ್ತಿದೆ. ದೇವದಾಸಿ ಪದ್ಧತಿಗೆ ತೊಡಗಿದ್ದವರು ದಲಿತ ಮಹಿಳೆಯರು ಮಾತ್ರ. ಜಾಗೃತಿ ಮೂಡಿಸುವ ಮೂಲಕ ಈ ಪದ್ಧತಿ ನಿರ್ಮೂಲನೆ ಮಾಡಬೇಕಿದೆ ಎಂದು ಹೇಳಿದರು.
ಸಮ ಸಮಾಜದ ಕನಸನ್ನು ಕಟ್ಟುವ ಆಶಯ ಮುಂದುವರೆಸಿಕೊಂಡು ಹೋಗಬೇಕೆಂದು ಕಾರ್ಲ್‌ಮಾರ್ಕ್ಸ್ ಹೇಳಿದ್ದಾರೆ. ಭೂಮಿ ಸರ್ಕಾರದ ಕೈಯಲ್ಲಿರಬೇಕು, ಕೈಗಾರಿಕೆಗಳು ಸಾರ್ವಜನಿಕ ಸ್ವತ್ತಾಗಬೇಕು ಎಂದು ಅಂಬೇಡ್ಕರ್ ಕೂಡ ಹೇಳಿದರು. ಇವರಿಬ್ಬರ ನಡುವಿನ ವ್ಯತ್ಯಾಸವನ್ನು ಸೃಷ್ಟಿ ಮಾಡುವ ಮೂರ್ಖರೂ ಇದ್ದಾರೆ. ಈ ಬಗ್ಗೆ ನಾವು ಎಚ್ಚರದಿಂದಿರಬೇಕು ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕರ್ತರು ಹಳ್ಳಿಗಳಿಗೆ, ನಗರದ ಬಡಾವಣೆಗಳಿಗೆ ತೆರಳಿ ಎಲ್ಲಾ ಜಾತಿಯ ಬಡವರ ಪರವಾಗಿ ಅವರ ಹಕ್ಕು- ಸೌಲಭ್ಯಗಳನ್ನು ಕೊಡಿಸಬೇಕು. ಸಂಘಟನೆ ಬಲವರ್ಧನೆಗೆ ಮುಂದಾಗಬೇಕು ಎಂದರು.
ಸಭೆಯನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಎಚ್.ಜಿ. ಉಮೇಶ್, ಮುಖಂಡರಾದ ಪಿ.ಷಣ್ಮುಖ ಸ್ವಾಮಿ, ಎಸ್.ಎಸ್. ಮಲ್ಲಮ್ಮ, ವಿ. ಲಕ್ಷ್ಮಣ, ಜಿ ಯಲ್ಲಪ್ಪ, ನರೇಗಾ ರಂಗನಾಥ್, ಶೇಖರ ನಾಯಕ್ ಮತ್ತಿತರರು ಮಾತನಾಡಿದರು.
ಯುವ ಮುಖಂಡ ಕೆರನಳ್ಳಿ ರಾಜು ಸ್ವಾಗತಿಸಿದರೆ ಎ. ತಿಪ್ಪೇಶ್ ವಂದಿಸಿದರು, ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಕೆ. ಬಾನಪ್ಪ ಕಾರ್ಯಕ್ರಮ ನಿರೂಪಿಸಿದರು.