ಜಿಲ್ಲೆ

ಪಾಲಿಕೆ ಆಸ್ತಿಗಳ್ಳರಿಗೆ ಲಗಾಮು ಸಾಮಾನ್ಯ ಸಭೆಯಲ್ಲಿ ನಿರ್ಣಯ

ಡಿ. ಎಂ. ಮಹೇಶ್

ದಾವಣಗೆರೆ: ಒತ್ತುವರಿಯಾದ ನಗರಪಾಲಿಕೆ ಆಸ್ತಿಗಳನ್ನು ಮರುಸ್ವಾಧೀನ ಪಡಿಸಿಕೊಂಡು ಹದ್ದುಬಸ್ತು ಮಾಡಬೇಕು. ತಪ್ಪಿತಸ್ಥರು, ಅಕ್ರಮಕ್ಕೆ ನೆರವಾಗುವ ಅಧಿಕಾರಿ-ಸಿಬ್ಬಂದಿಗೆ ಶಿಕ್ಷೆ ವಿಧಿಸಲು ದಾವಣಗೆರೆ ನಗರಪಾಲಿಕೆ ನಿರ್ಣಯಿಸಿದೆ.
ಸೋಮವಾರ, ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮೇರ್ ಕೆ. ಚಮನ್‌ಸಾಬ್, ಪಾಲಿಕೆ ಆಸ್ತಿ ಊರಿನ ಜನರದು.  ಒತ್ತುವರಿ ಬಗ್ಗೆ ಪಾಲಿಕೆ ಸದಸ್ಯರು ಶಂಕೆ ವ್ಯಕ್ತಪಡಿಸಿದಲ್ಲಿ ಅಧಿಕಾರಿಗಳು ತಕ್ಷಣವೇ ದೂರು ದಾಖಲಿಸಿ, ಪರಿಶೀಲಿಸಿ ಆಯುಕ್ತರಿಗೆ ವರದಿ ನೀಡಬೇಕು. ಆಸ್ತಿ ಉಳಿಸಬೇಕು. ಅಕ್ರಮಕ್ಕೆ ಸಹಕರಿಸಿದ್ದಲ್ಲಿ ಸಿಬ್ಬಂದಿಯನ್ನು ಮನೆಗೆ ಕಳುಹಿಸಿ ಎಂದು ರೂಲಿಂಗ್ ನೀಡಿದರು.
ಸದಸ್ಯ ಆರ್.ಎಲ್. ಶಿವಪ್ರಕಾಶ್ ಚಿಕ್ಕಮ್ಮಣಿ ದೇವರಾಜ ಅರಸು ಬಡಾವಣೆಯಲ್ಲಿ ಪಾಲಿಕೆಯ ನಿವೇಶನಗಳಲ್ಲಿ ಮೂರಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸಲಾಗಿದ್ದು ಆಯುಕ್ತರಿಗೆ ವರದಿ ನೀಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
ರೈಲ್ವೆ ಇಲಾಖೆಯಲ್ಲಿ ತುಂಡು ಕಬ್ಬಿಣ ಒಯ್ಯಲು ಭಯ ಇದೆ. ಪಾಲಿಕೆ ಆಸ್ತಿ ಒತ್ತುವರಿ ಮಾಡುವವರಿಗೆ ಭಯ ಇಲ್ಲವಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಆಗಬೇಕೆಂದು ಎಸ್.ಟಿ.ವೀರೇಶ್ ಆಗ್ರಹಿಸಿದರು. ಪಾಲಿಕೆ ಆಸ್ತಿಗಳಿಗೆ ತಂತಿಬೇಲಿ ಹಾಕಿ ಹದ್ದುಬಸ್ತು ಮಾಡಬೇಕೆಂದು ಎ.ನಾಗರಾಜ್ ಸಲಹೆ ನೀಡಿದರು.
ಪ್ರಕರಣವೊಂದರ ಬಗ್ಗೆ ಉತ್ತರಿಸಿದ ಆಯುಕ್ತೆ ರೇಣುಕಾ, ಸುಪ್ರೀಂಕೋರ್ಟ್ ಕೆಲವು ಪ್ರಕರಣಗಳಲ್ಲಿ ತೀರ್ಪು ನೀಡಿದ್ದರೂ ಸ್ಥಳೀಯ ಸಂಸ್ಥೆಗಳು ನಗರಪಾಲಿಕೆ ಕಾಯ್ದೆ ಅನ್ವಯ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
ಬೀದಿನಾಯಿಗಳ ಹಾವಳಿ ಚರ್ಚೆ
ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಕೆಲವು ಬಡಾವಣೆಗಳಲ್ಲಿ ಜನರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಇವನ್ನು ಹಸ್ತಾಂತರಿಸಿ ಎಂದು ಉಮಾಪ್ರಕಾಶ್, ಮೀನಾಕ್ಷಿ ಜಗದೀಶ್, ಅಬ್ದುಲ್ ಲತೀಫ್ ಹೇಳಿದರು.
ವರ್ಷವಾರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು 50 ಲಕ್ಷ ರೂ.ಗಳಷ್ಟು ವ್ಯಯವಾಗಲಿದೆ. ಇದು ಕುದುರೆಗೆ ಹುಲ್ಲು ತಿನ್ನಿಸಿದಂತಾಗಲಿದೆ. ಇದರ ಬದಲು ನಾಯಿಗಳನ್ನು ಸ್ಥಳಾಂತರಿಸಬೇಕೆಂದು ಉಪಮೇಯರ್ ಸೋಗಿ ಶಾಂತಕುಮಾರ್ ಹೇಳಿದರು.
ಪ್ರಾಣಿ ದಯಾ ಸಂಘಕ್ಕೆ ನಾಯಿಗಳ ಸಾಕಾಣಿಕೆ ಹೊಣೆ ನೀಡಬೇಕೆಂದು ಅಬ್ದುಲ್ ಲತೀಫ್ ಹೇಳಿದರು. ನಾಯಿ ಕಡಿತಕ್ಕೆ ಒಳಗಾದವರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಎ.ನಾಗರಾಜ್ ಒತ್ತಾಯಿಸಿದರು.
2026ರ ಪಶುಪಾಲನೆ ಇಲಾಖೆ ಸರ್ವೆಯಂತೆ ನಗರದಲ್ಲಿ 16 ಸಾವಿರ ನಾಯಿಗಳಿದ್ದು ವರ್ಷಕ್ಕೆ ಶೇ.20ರಿಂದ 30ರಷ್ಟು ಏರಿಕೆ ಆಗುತ್ತಿವೆ. 7500 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಾಗಿದ್ದು, ಉಳಿದವಕ್ಕೆ ಪ್ರಕ್ರಿಯೆ ನಡೆಸಬೇಕಿದೆ. ಪಾಲಿಕೆ ಕಾಯ್ದೆಯಡಿ ನಾಯಿಗಳನ್ನು ಕೊಲ್ಲಲು ಅವಕಾಶವಿಲ್ಲ. ನಾಯಿ ಕಡಿತಕ್ಕೆ ಒಳಗಾದ ಆರು ಮಂದಿಗೆ ಪರಿಹಾರ ನೀಡಲಾಗಿದೆ ಎಂದು ಆಯುಕ್ತರು ಹೇಳಿದರು.

ಇ-ಸ್ವತ್ತು ಸರಳೀಕರಿಸಲು ಆಗ್ರಹ
ಸಾರ್ವಜನಿಕರು ಅರ್ಜಿ ಸಲ್ಲಿಸಿದ 48 ಗಂಟೆಯೊಳಗೆ ಇ-ಸ್ವತ್ತು ಕಲ್ಪಿಸಬೇಕು. ನಿಯಮ ಸರಳೀಕರಿಸಬೇಕು. ಲೋಡರ್ಸ್‌, ವಾಹನ ಚಾಲಕರು, ವಾಲ್ವ್‌ಮೆನ್‌ಗಳನ್ನು ನೇರ ಪಾವತಿಗೆ ಒಳಪಡಿಸಬೇಕು ಎಂದು ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಆಗ್ರಹಿಸಿದರು.
ಸಕಾಲದಲ್ಲಿ 7 ದಿನದ ಅವಕಾಶವಿದೆ. ಅದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಆಯುಕ್ತರು ಉತ್ತರಿಸಿದರು.
ಎರಡು ದಿನದಲ್ಲಿ ನೀಡಬಹುದು. ಯಾಕೆ ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ಸಾಫ್ಟ್‌ವೇರ್ ಸರಿಪಡಿಸಿಕೊಳ್ಳಲು ಸರ್ಕಾರದ ಜತೆ ವ್ಯವಹರಿಸಿ ಎಂದು ಎ.ನಾಗರಾಜ್‌ಹೇಳಿದರು.
ಇ-ಸ್ವತ್ತು ನೀಡಲು 20 ಸಾವಿರದಿಂದ 30 ಸಾವಿರ ರೂ. ಲಂಚ ಕೇಳಲಾಗುತ್ತಿದೆ. ಇದರಿಂದಾಗಿ ಮೇಯರ್ ಸೇರಿ ಎಲ್ಲ ಸದಸ್ಯರ ಮೇಲೂ ಆರೋಪ ಬರಲಿದೆ. ಭ್ರಷ್ಟಾಚಾರ ನಿಯಂತ್ರಣ ಮಾಡಬೇಕೆಂದು ಎಸ್‌ಟಿ ವೀರೇಶ್ ಆಗ್ರಹಿಸಿದರು.
ಗೂಗಲ್ ಸಭೆಗಳ ಮೂಲಕ ಕೆಳಗಿನ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ. ಇದುವರೆಗೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ 13 ಜನ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಆಯುಕ್ತರು ಹೇಳಿದರು.
ಆರ್.ಶಿವಾನಂದ್ ನೀಡಿದ ಸಲಹೆಯಂತೆ ದಿನವಹಿ ಸ್ವೀಕರಿಸಲಾದ ಇ-ಸ್ವತ್ತು ಅರ್ಜಿ, ವಿಲೇವಾರಿ ಹಾಗೂ ಎಂಡಾರ್ಸ್‌ಮೆಂಟ್ ವಿವರವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಮೇಯರ್ ಸೂಚಿಸಿದರು.
ಎರಡು ಸಾಲಿನ ಅವಧಿಯಲ್ಲಿ ಸಾಮಾನ್ಯ ನಿಧಿಯಡಿ 50 ಕೋಟಿ ರೂ. ಅಂದಾಜು ಮೊತ್ತದ ಟೆಂಡರ್ ಕರೆದಿದ್ದೀರಿ. ಸಾಮಾನ್ಯ ನಿಧಿಯಲ್ಲಿ ಹಣವೇ ಇಲ್ಲ. ಹೀಗಿರುವಾಗ ಟೆಂಡರ್ ಕರೆದಿದ್ದು ಸರಿಯಲ್ಲ ಎಂದು ಪ್ರಸನ್ನಕುಮಾರ್ ಹೇಳಿದರು.
ಬಿಬಿಎಂಪಿ ಮಾದರಿಯಲ್ಲಿ, ನೇರಪಾವತಿಗೆ ಒಳಪಟ್ಟ ಪೌರಕಾರ್ಮಿಕರು ಮೃತರಾದಾಗ ಪರಿಹಾರ ಹಾಗೂ ಅವರ ಕುಟುಂಬ ಸದಸ್ಯರೊಬ್ಬರಿಗೆ ಅನುಕಂಪದ ಕೆಲಸ ನೀಡಬೇಕೆಂದು ನಾಮನಿರ್ದೇಶನ ಸದಸ್ಯ ಎಲ್‌ಎಚ್ ಸಾಗರ್ ಮನವಿ ಮಾಡಿದರು. ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಆಯುಕ್ತರು ಹೇಳಿದರು.
ನಗರದಲ್ಲಿ ಗುತ್ತಿಗೆ ಆಧಾರದಡಿ 165 ಮಂದಿ ಲೋಡರ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ಧಾರೆ. ಮಧ್ಯವರ್ತಿಗಳು ಅವರ ರಕ್ತ ಹೀರುತ್ತಿದ್ದಾರೆ. ಅವರನ್ನು ನೇರಪಾವತಿಗೆ ಒಳಪಡಿಸಬೇಕು ಎಂದು ಗೋಣೆಪ್ಪ ಆಗ್ರಹಿಸಿದರು. ಇದಕ್ಕೆ ಆಯುಕ್ತರು ಸಮ್ಮತಿಸಿದರು.
8 ತಿಂಗಳ ನಂತರ ಸಭೆ ನಡೆಯುತ್ತಿದೆ. 34ನೆ ವಾರ್ಡ್‌ನ ಕಾಮಗಾರಿಗೆ ಇದುವರೆಗೆ ಕಾರ್ಯಾದೇಶ ನೀಡಲಾಗಿಲ್ಲ ಎಂದು ಮಂಜಾನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ತಿಂಗಳಿಗೊಮ್ಮೆ ಸಭೆ ನಡೆಸುವುದಾಗಿ ಮೇಯರ್ ಹೇಳಿದರು.