ದಾವಣಗೆರೆ: ದಾವಣಗೆರೆಯಲ್ಲಿ ಕರೊನಾ ತಾಂಡವ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮಂಗಳವಾರ ಒಂದೇ ದಿನ ಬರೋಬ್ಬರಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 50 ವರ್ಷದ ಮಹಿಳೆ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 3ಕ್ಕೇರಿದೆ.
ನಗರದ ನಿವಾಸಿ ಪಿ-662 ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಈ ಮಹಿಳೆ ಮೊದಲಿನಿಂದಲೂ ವೈರಲ್ ನಿಮೋನಿಯಾದಿಂದ ಬಳಲುತ್ತಿದ್ದರು. ಮೇ 2ರಂದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರವೇ ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಇವರು ಜಾಲಿನಗರದ ಮೃತ ವೃದ್ಧನ ನೆರೆಹೊರೆಯಲ್ಲಿದ್ದವರು.
ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 32ರಿಂದ 44ಕ್ಕೆ ಏರಿಕೆಯಾಗಿದೆ. 12 ಹೊಸ ಪ್ರಕರಣಗಳಲ್ಲಿ 5 ವರ್ಷದ ಬಾಲಕ, 15 ವರ್ಷದ ಬಾಲಕಿ ಮತ್ತು 19 ವರ್ಷದ ಯುವತಿ ಸೇರಿದ್ದಾರೆ.
ಹೊಸ 12 ಪ್ರಕರಣಗಳ ಪೈಕಿ 5 ಜನ ಸೋಂಕಿತರು ಜಾಲಿನಗರದ ವೃದ್ಧನ ಸಂಪರ್ಕ, ಉಳಿದ 7 ಮಂದಿ ಪಿ-581 ಸಂಪರ್ಕದಲ್ಲಿದ್ದವರು. ಪಿ-661, 662 ಮತ್ತು 663 ಈ ಮೂವರೂ ಜಾಲಿನಗರದ ವೃದ್ಧನ ನೆರೆಹೊರೆಯಲ್ಲಿದ್ದು, ಆತನ ಜತೆಗೆ ಓಡಾಡಿದ್ದರು. ಪಿ-556, 581 ಮತ್ತು 533 ಈ ಮೂರೂ ಪ್ರಕರಣಗಳು ಒಂದಕ್ಕೊಂದು ಸಂಬಂಧ ಹೊಂದಿವೆ.
ಮೇ 1ರ ರಾತ್ರಿ ಇಲ್ಲಿನ ಜಾಲಿನಗರದ 69 ವರ್ಷದ ವೃದ್ಧ, ಮೇ 2ರ ಮಧ್ಯರಾತ್ರಿ 48 ವರ್ಷದ ಮಹಿಳೆ (ಪಿ-651) ಕರೊನಾದಿಂದ ಸಾವಿಗೀಡಾಗಿದ್ದರು. ಭಾನುವಾರ ಒಂದೇ ದಿನ 21 ಜನರಲ್ಲಿ ಸೋಂಕು ದೃಢಪಟ್ಟಿತ್ತು.
ವ್ಯಾಪಕ ಆರೋಗ್ಯ ಸಮೀಕ್ಷೆ: ನಗರದ 4 ಕಂಟೇನ್‌ಮೆಂಟ್ ವಲಯಗಳಲ್ಲಿ ವ್ಯಾಪಕ ಆರೋಗ್ಯ ಸಮೀಕ್ಷೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕುರಿತು ರಾಜ್ಯ ಸರ್ವೆಲನ್ಸ್ ಅಧಿಕಾರಿ ಜತೆಗೆ ಮಾತನಾಡಿದ್ದೇವೆ. ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ಅಲ್ಲಿಗೆ ಕಳಿಸಿ ಆರೋಗ್ಯ ತಪಾಸಣೆ ಮಾಡಲಾಗುವುದು. ಲಕ್ಷಣಗಳು ಕಂಡುಬಂದರೆ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರಲಾಗುವುದು. ಸೋಂಕು ಹರಡದಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದರು.
ಮಂಗಳವಾರ 95 ಮಾದರಿ ಕಳಿಸಲಾಗಿದ್ದು, ಇನ್ನೂ 232 ಮಾದರಿಗಳ ಫಲಿತಾಂಶ ಬರುವುದು ಬಾಕಿಯಿದೆ. ಕಂಟೇನ್‌ಮೆಂಟ್ ವಲಯಕ್ಕೆ ಹೋಗುವ ಸರ್ವೆಲನ್ಸ್ ತಂಡದವರಿಗೆ ನಾಳೆಯಿಂದ ಪಿಪಿಇ ಕಿಟ್‌ಗಳನ್ನು ನೀಡಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು ಎಂದು ಹೇಳಿದರು.
ಕಂಟೇನ್‌ಮೆಂಟ್ ವಲಯದ ಜನರು ಯಾರೂ ಮನೆಯಿಂದ ಹೊರಗೆ ಬರಬಾರದು. ಅನಿವಾರ್ಯ ಸಂದರ್ಭದಲ್ಲಿ ಬಂದರೂ ಹೊರಗೆ ಏನನ್ನೂ ಮುಟ್ಟಬಾರದು. ಈ ವಲಯಗಳಿಗೆ ಆಹಾರ, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ತಲುಪಿಸಲಾಗುವುದು ಎಂದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಪಿಡಮಾಲಜಿಸ್ಟ್ ಡಾ.ಯತೀಶ್ ಸುದ್ದಿಗೋಷ್ಠಿಯಲ್ಲಿದ್ದರು.
ಕೆಟಿಜೆ ನಗರ ಕಂಟೇನ್‌ಮೆಂಟ್ ವಲಯ: ರೋಗಿ ಸಂಖ್ಯೆ 665 ಕೆಟಿಜೆ ನಗರದವರಾದ ಕಾರಣ ಅವರ ಮನೆಯನ್ನು ಎಪಿಸೆಂಟರ್ ಎಂದು ಗುರುತಿಸಿ ಅಲ್ಲಿಂದ 100 ಮೀ. ವ್ಯಾಪ್ತಿಯನ್ನು ಕಂಟೇನ್‌ಮೆಂಟ್ ವಲಯವಾಗಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದರು.
ಈರುಳ್ಳಿ ಲಾರಿಯಲ್ಲಿ ಪ್ರಯಾಣ: ರೋಗಿ ಸಂಖ್ಯೆ 619 ಈರುಳ್ಳಿ ಲಾರಿಯಲ್ಲಿ ಹಾಸನದ ಜಾವಗಲ್‌ಗೆ ಹೋಗಿ ಬಂದಿದ್ದರು. ರೋಗಿ ಸಂಖ್ಯೆ 617 ಸಹ ಈರುಳ್ಳಿ ಲಾರಿಯಲ್ಲಿ ಚಿತ್ರದುರ್ಗ, ಬಳ್ಳಾರಿ ಇತರ ಕಡೆ ಹೋಗಿ ಬಂದಿದ್ದು ಸೋಂಕಿನ ಮೂಲ ಪತ್ತೆ ಕಾರ್ಯ ಅಂತಿಮ ಹಂತದಲ್ಲಿದೆ. ಗುಜರಾತ್‌ನಿಂದ ಬಂದವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ, ಅವರ ಮಾದರಿ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ರೋಗಿ ಸಂಖ್ಯೆ-533ಗೆ ಸಂಬಂಧಪಟ್ಟಂತೆ ಬಾಗಲಕೋಟೆ ಜಿಲ್ಲೆಗೆ ಮದುವೆಗೆ ಹೋಗಿಬಂದವರ ವರದಿ ಕೂಡ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.