ಜಿಲ್ಲೆ

ನೀರಾವರಿ ಯೋಜನೆಗಳತ್ತ ಆಸಕ್ತಿ ವಹಿಸಿ* ಸಹಕಾರಿ ಸಂಸ್ಥೆಗಳಿಗೆ ಗೋವಿಂದ ಕಾರಜೋಳ ಸಲಹೆ

ದಾವಣಗೆರೆ: ಸಹಕಾರಿ ಸಂಸ್ಥೆಗಳು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ರೈತರಿಗೆ ಮಾಹಿತಿ, ಜ್ಞಾನ ನೀಡಿದರೆ ಇದರಲ್ಲಿ ಯಶ ಸಾಧಿಸುವುದು ಕಷ್ಟವಲ್ಲ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಸಹಕಾರ ಭಾರತಿ- ಕರ್ನಾಟಕ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸಹಕಾರಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
40 ವರ್ಷದ ಹಿಂದೆ ಕೆಲವರು ಪ್ರಾಯೋಗಿಕವಾಗಿ ಏತ ನೀರಾವರಿ ಯೋಜನೆ ಆರಂಭಿಸಿದ್ದರೂ ಯಶಸ್ಸು ಸಿಗಲಿಲ್ಲ. ಹಳ್ಳ-ಕೊಳ್ಳ, ಕೆರೆ ಕಟ್ಟೆ ತುಂಬುವಂತೆ ರೈತರು ಸಾಮೂಹಿಕ ನೀರಾವರಿ ಮಾಡಿದಲ್ಲಿ ಖರ್ಚು ತಗ್ಗುವ ಜತೆಗೆ ನೀರಿನ ಸದ್ಬಳಕೆ ಆಗಲಿದೆ. ಇದರತ್ತ ಸಹಕಾರಿ ಸಂಸ್ಥೆಗಳು ಒತ್ತು ನೀಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರವು ಅಡುಗೆ ಅನಿಲ ವಿತರಣಾ ಏಜೆನ್ಸಿ, ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ ನೀಡಿದೆ. ಹಳ್ಳಿಗಳಲ್ಲಿ ಇಂದು ನ್ಯಾಯಬೆಲೆ ಅಂಗಡಿಗಳು ಕಡಿಮೆ. ಇದನ್ನು ಆರಂಭಿಸಿದಲ್ಲಿ ಸಂಜೆ ನಂತರವೂ ಜನರು ಪಡಿತರ ಪಡೆಯಬಹುದು. ಸಿಬ್ಬಂದಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಒಂದು ದಿನದಲ್ಲಿ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕ ರೈತರಿಗೆ ಸರ್ಕಾರ 5 ಕೋಟಿ ರೂ.ಗಳ ಪ್ರೋತ್ಸಾಹಧನ ನೀಡುತ್ತಿದೆ. ಪಶು ಸಂಗೋಪನೆ, ಶಿಕ್ಷಣ, ಹಣಕಾಸು, ಕೈಗಾರಿಕೆ ಬೆಳವಣಿಗೆ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಯುವಕರನ್ನು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಕನಿಷ್ಠ ಸಾಲ ನೀಡಲು ಪೇಚಾಡುತ್ತಿದ್ದ ಸಹಕಾರಿ ಸಂಸ್ಥೆಗಳು ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳ ಜತೆ ಪೈಪೋಟಿ ಮಾಡುವಂತೆ, 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಇದರಿಂದ ರೈತರು ಉದ್ಧ್ದಾರ ಆಗಿದ್ದಾರೆ. ಹಳ್ಳಿಯ ಸಹಕಾರಿ ಸಂಸ್ಥೆಗಳು 25 ಕೋಟಿ ರೂ.ವರೆಗೆ ವ್ಯವಹಾರ ನಡೆಸುತ್ತಿವೆ ಎಂದು ಹೇಳಿದರು.
ಸಹಕಾರಿ ಸಂಸ್ಥೆಗಳು ದೇಶದ ಜಿ.ಡಿ.ಪಿ.ಗೆ ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಮೋದಿ ಸರ್ಕಾರ ಸಹಕಾರಕ್ಕೆ ಪ್ರತ್ಯೇಕ ಇಲಾಖೆ ರೂಪಿಸಿ, 55 ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗುವ ಕಾಲ ಬಂದಿದೆ. ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆ ಉತ್ತಮವಾಗಿದೆ. ಹಾಲಿನ ಸೊಸೈಟಿಗಳ ರೀತಿಯಲ್ಲಿ ಕಾಳಿನ ಸೊಸೈಟಿಗಳೂ ಸಹಕಾರಿಗಳ ಮೂಲಕ ಸ್ಥಾಪನೆಯಾಗಬೇಕು. ಸಹಕಾರಿ ಸಂಸ್ಥೆಗಳ ಬಲವರ್ಧನೆಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
‘ಸಹಕಾರ ದರ್ಪಣ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಸೇರಿಕೊಂಡಿರುವ ಕಾರಣದಿಂದ ಹಲವು ಸಂಸ್ಥೆಗಳು ಮುಳುಗುವ ಸ್ಥಿತಿಯಲ್ಲಿವೆ ಎಂದು  ವಿಷಾದಿಸಿದರು.
ಅತ್ಯುತ್ತಮ ಕೆಲಸಗಾರರನ್ನು ಸಹಕಾರಿ ಸಂಘಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರಾಗಿ ನೇಮಿಸಬೇಕೇ ಹೊರತು, ರಾಜಕೀಯ ಒತ್ತಡದಿಂದಲ್ಲ. ಸಹಕಾರಿ ಸಂಸ್ಥೆಗಳ ಅಧಿಕಾರ ಹಿಡಿಯುವವರಲ್ಲಿ ಸಂಸ್ಥೆಗಳನ್ನು ಬೆಳೆಸುವ ಶಕ್ತಿ ಇರಬೇಕು ಎಂದು ತಿಳಿಸಿದರು.
ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ್ ಶೀಲವಂತ್ ಮಾತನಾಡಿ, ಸಹಕಾರಿ ಚಳವಳಿಗೆ ಯುವಕರ ಅಗತ್ಯವಿದೆ. ಹೆಚ್ಚು ಯುವಕರು ಸಹಕಾರಿ ವಲಯಗಳಿಗೆ ಪ್ರವೇಶ ಪಡೆಯಬೇಕು ಎಂದು ತಿಳಿಸಿದರು.
ಯುವ ಪೀಳಿಗೆಗೆ ಸಹಕಾರಿ ವಲಯದಲ್ಲಿ ಆಸಕ್ತಿ ಬರುತ್ತಿಲ್ಲ. ಸ್ಥಳೀಯ ಸಹಕಾರಿಗಳು ಈ ಬಗ್ಗೆ ವಿಶೇಷ ಜವಾಬ್ದಾರಿ ವಹಿಸಬೇಕಿದೆ. ಸಂಘಗಳಲ್ಲಿ ಯುವಕರಿಗೆ ನಿರ್ದೇಶಕರಾಗಲು ಅವಕಾಶ ನೀಡದೆ ಈ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ ರಮೇಶ್ ವೈದ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಉದಯ ವಾಸುದೇವ್ ಜೋಶಿ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ. ನಂಜನಗೌಡ, ಮಾಜಿ ಸಚಿವ ಹಾಲಪ್ಪ ಆಚಾರ್ಯ, ಕೃಷ್ಣಾರೆಡ್ಡಿ, ಮುರುಗೇಶ್ ಆರಾಧ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನದಾಸ್ ನಾಯ್ಕ, ಜಿಲ್ಲಾಧ್ಯಕ್ಷ ಜಿ.ಎನ್. ಸ್ವಾಮಿ, ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಎಂ.ಆರ್. ಪ್ರಭುದೇವ್ ಇದ್ದರು.