ಜಿಲ್ಲೆ

ವಿಶ್ವ ಕನ್ನಡ ಸಮ್ಮೇಳನ ಸಿಎಂಗೆ ಮನವರಿಕೆ - ಸಚಿವ ಮಲ್ಲಿಕಾರ್ಜುನ್

ಡಿ. ಎಂ. ಮಹೇಶ್

ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನಕ್ಕೆ ಘೋಷಿತ ಅನುದಾನ ರಾಜ್ಯ ಬಜೆಟ್‌ನಲ್ಲಿ ಬಿಡುಗಡೆ ಆಗಬೇಕಿದೆ. ಮುಖ್ಯಮಂತ್ರಿ ಅವರಲ್ಲಿ ಈ ಸಂಬಂಧ ಮನವರಿಕೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2018ರ ಅವಧಿಯಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು 2018ರಲ್ಲಿ ನಿಗದಿ ಮಾಡಿ 30 ಕೋಟಿ ರೂ.ಗಳನ್ನು ಸರ್ಕಾರ ಘೋಷಿಸಿತ್ತು. ಸಮ್ಮೇಳನ ಆಯೋಜನೆ ಸಂಬಂಧ ಪರಿಶೀಲನೆ ಮಾಡುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಅವರಲ್ಲಿ ಮತ್ತೊಮ್ಮೆ ಮನವರಿಕೆ ಮಾಡಲಾಗುವುದು ಎಂದರು.
ಅಶೋಕ ರೈಲ್ವೆಗೇಟ್ ಬಳಿ ಪರ್ಯಾಯ ಅಂಡರ್ ಪಾಸ್ ಹಾಗೂ ಪರ್ಯಾಯ 60 ಅಡಿ ರಸ್ತೆ ನಿರ್ಮಾಣಕ್ಕೆ ಈಗಾಗಲೆ ಅಲ್ಲಿನ ಕೆಲವು ಕುಟುಂಬಗಳ ಜತೆ ಮಾತುಕತೆ ನಡೆಸಿ 27 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. ಸಂಬಂಧಿತ ಇಲಾಖೆಯವರಿಗೆ ಸುವ್ಯವಸ್ಥಿತ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದರು.
ಕುಂದುವಾಡ ಕೆರೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗುತ್ತಿದ್ದು ಬರುವ ದಿನದಲ್ಲಿ ಪ್ರವಾಸಿ ತಾಣವಾಗಲಿದೆ. ನೂತನ ತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿ ಸರ್ವೇ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯನ್ನೂ ನಿರ್ಮಿಸಬೇಕಿದೆ. 13 ಕೋಟಿ ರೂ. ಬಂದಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಕಚೇರಿ ಸ್ಥಳಾಂತರವಾಗಲಿದೆ. ತುರ್ಚಘಟ್ಟದಲ್ಲಿ ಜಿಲ್ಲಾ ಬಂಧೀಖಾನೆ ನಿರ್ಮಾಣಕ್ಕೆ ಸರ್ಕಾರಕ್ಕೆ 64 ಕೋಟಿ ರೂ.ಗಳ ಪ್ರಸ್ತಾವ ಸಲ್ಲಿಕೆಯಾಗಿದೆ ಎಂದು ವಿವರಿಸಿದರು.
ಜಲಸಿರಿ ಉತ್ತಮ ಯೋಜನೆಯಾಗಿದ್ದು 160 ಕೋಟಿ ರೂ. ಮೊತ್ತದ ಕಾಮಗಾರಿ ನಡೆದಿದೆ. ಬಾತಿ ಸಮೀಪ ಟ್ರೀಟ್‌ಮೆಂಟ್ ಪ್ಲಾೃಂಟ್ ಹರಿಹರ ಬಳಿ ಬ್ಯಾರೇಜ್ ನಿರ್ಮಾಣ ಆಗುತ್ತಿದೆ. ಶೀಘ್ರವೇ ನಗರಕ್ಕೆ ಸಮರ್ಪಕವಾಗಿ ನೀರೊದಗಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಮಕ್ಕಳು ಹಾಗೂ ಸಾರ್ವಜನಿಕರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಗೈಡ್ ಮೂಲಕ ಪರಿಚಯ ಮಾಡಿಸಲು ವಾರಾಂತ್ಯ ದಿನಗಳಲ್ಲಿ ಬಸ್ ಸಂಚಾರ ಆರಂಭಿಸುವ ಬಗ್ಗೆ ರೂಪರೇಷೆ ನಿರ್ಧರಿಸಲಾಗುತ್ತಿದೆ. ಇದನ್ನು ಮಹಿಳಾ ದಿನಾಚರಣೆ ವೇಳೆಗೆ ಪ್ರಕಟಿಸಲಾಗುವುದುನ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.