ದಾವಣಗೆರೆ: ತಲಾ ಮೂರು ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಜೂ. 3ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮತದಾರರು ಪ್ರಥಮ ಪ್ರಾಶಸ್ತ್ಯದ ಮತದೊಂದಿಗೆ ಆಯ್ಕೆ ಮಾಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ್ ಗುರಿಕಾರ ಮನವಿ ಮಾಡಿದರು.
ರಾಜ್ಯ ಸರ್ಕಾರದ ಸಾಧನೆ, ಉತ್ತಮ ಆಡಳಿತ ಗಮನಿಸಿ ಪದವೀಧರ ಮತದಾರರು, ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ. ವಿಧಾನ ಪರಿಷತ್ತಿನ ಆರು ಸ್ಥಾನಗಳನ್ನು ಗೆಲ್ಲುವ ಆಶಾಭಾವನೆ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ 11494 ಶಿಕ್ಷಕರು, 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. 2162 ಸರ್ಕಾರಿ ಶಾಲೆಗಳ 7342 ಕೊಠಡಿಗಳ ದುರಸ್ತಿಗೆ 70 ಕೋಟಿ ರೂ. ಅನುದಾನ ನೀಡಲಾಗಿದೆ. 58 ಲಕ್ಷ ವಿದ್ಯಾರ್ಥಿಗಳಿಗೆ 280 ಕೋಟಿ ರೂ. ವೆಚ್ಚದಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗಿದೆ. 45 ಲಕ್ಷ ಮಕ್ಕಳಿಗೆ 143 ಕೋಟಿ ರೂ. ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅತ್ಯುತ್ತಮ ಸಾಧನೆ ಮಾಡಿದ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರೂ.ನಂತೆ ದಂತೆ ಒಟ್ಟು 350 ಕೋಟಿ ರೂ. ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಕನಿಷ್ಠ 5 ಸಾವಿರ, ಗರಿಷ್ಠ 8 ಸಾವಿರ ರೂ. ವೇತನ ಹೆಚ್ಚಳ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ರಜೆಯ ಸೌಲಭ್ಯ ನೀಡಲಾಗಿದೆ. 5 ಲಕ್ಷ ರೂ. ವೈದ್ಯಕೀಯ ಸೌಲಭ್ಯ, ನಿವೃತ್ತಿ ವೇಳೆ 5 ಲಕ್ಷ ರೂ. ಇಡಿಗಂಟು ನೀಡಲಾಗುವುದು.
19 ಸಾವಿರ ಎನ್‌ಪಿಎಸ್ ವ್ಯಾಪ್ತಿಯಲ್ಲಿದ್ದ ನೌಕರರನ್ನು ಒಪಿಎಸ್‌ಗೆ ಒಳಪಡಿಸಲಾಗಿದೆ. 29 ಸಾವಿರ ಶಿಕ್ಷಕರಿಗೆ ಒಪ್ಪಿಗೆ ಮೇರೆಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡಿದ ಕ್ಷಣಾರ್ಧದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಿಮ್ಮಯ್ಯ ಪುರ್ಲೆ, ಎಂ.ಆರ್.ಮಾರ್ತಾಂಡಪ್ಪ, ಲಕ್ಷ್ಮಣ್, ಅನುಪಮಾ, ವೀರೇಶ್, ಆರ್.ಎಸ್. ಪಾಟೀಲ್, ಜಿ.ಬಿ.ಹಾವೇರಿ ಇತರರು ಇದ್ದರು.
--