ದಾವಣಗೆರೆ: ಒಂದು ಪ್ಯಾನ್ ಕಾರ್ಡ್ ಇದೆ. ನನ್ನ ಬಳಿ 47 ಸಾವಿರ ರೂ., ಪತ್ನಿ ಹೆಸರಲ್ಲಿ 1 ಸಾವಿರ ರೂ. ಠೇವಣಿ ಇದೆ. ಉಳಿದಂತೆ ಯಾವ ಆಸ್ತಿಯೂ ಇಲ್ಲ!
ಶುಕ್ರವಾರ ನಾಮಪತ್ರ ಸಲ್ಲಿಸಲು ಬಂದಿದ್ದ, ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿಯ ವಡ್ಡರಹಟ್ಟಿ ನಿವಾಸಿ ಪಕ್ಷೇತರ ಅಭ್ಯರ್ಥಿ ಎಸ್. ಪೆದ್ದಪ್ಪ ನೀಡಿದ್ದ 10 ಪುಟದ ಅಫಡವಿಟ್‌ನಲ್ಲಿ ಯಾವುದೇ ಕಾಲಂಗಳಲ್ಲೂ ‘ಇಲ್ಲ’, ‘ಅನ್ವಯಿಸುವುದಿಲ್ಲ’ ಎಂಬುದರ ಬದಲಾಗಿ ಬೇರಾವ ಉತ್ತರವೂ ಇರಲಿಲ್ಲ. ಮೋಟಾರು ವಾಹನವಿಲ್ಲ. ಆಭರಣಗಳಿಲ್ಲ. ಭೂಮಿ ಖರೀದಿಸಿಲ್ಲ. ಅಂಚೆ ಕಚೇರಿಯಲ್ಲಿ ಯಾವ ಸೇವಿಂಗ್ಸ್ ಕೂಡ ಇಲ್ಲ ಎಂದಿತ್ತು.
ಹುಚ್ಚವ್ವನಹಳ್ಳಿ ಗ್ರಾಪಂ ಸದಸ್ಯರಾಗಿರುವ ಪೆದ್ದಪ್ಪ, ತಂದೆ ಸಿದ್ದಪ್ಪ ಅವರ ಹೆಸರಲ್ಲಿರುವ ಮೂರು ಎಕರೆ ಜಮೀನು ನೋಡಿಕೊಳ್ಳುತ್ತಿದ್ದಾರೆ. ಮೆಕ್ಕೆಜೋಳ ಬೆಳೆದಿದ್ದರೂ ಮಳೆ ಇಲ್ಲದೆ ಈ ಬಾರಿ ಫಸಲು ಸಿಕ್ಕಿಲ್ಲ. ಆದರೂ ಲೋಕಸಭೆ ಚುನಾವಣೆಗೆ ನಿಲ್ಲುವ ಆಸೆಯಿಂದ ಮೊದಲ ಬಾರಿಗೆ ಪಕ್ಷೇತರ ಸ್ಪರ್ಧೆಗಿಳಿದಿದ್ದಾರೆ.
‘ದ್ವಿತೀಯ ಪಿಯು ಓದಿದ್ದೇನೆ. ಪಂಚಾಯಿತಿ ಸದಸ್ಯನಾಗಿ ಹಲವರಿಗೆ ವಿಧವಾ ವೇತನ, ಅಂಗವಿಕಲರ ಮಾಸಾಶನ ಕೊಡಿಸಿದ್ದೇನೆ. ಊರಿನಲ್ಲಿ ರಸ್ತೆ ಮಾಡಿಸಿದ್ದೇನೆ. ಕೆಲವರಿಗೆ ಮನೆ ಕೊಡಿಸಿದ್ದೇನೆ. ಲೋಕಸಭಾ ಸದಸ್ಯನಾದರೆ ಇನ್ನಷ್ಟು ಜನಸೇವೆ ಮಾಡಬಹುದು ಎಂಬ ಉದ್ದೇಶದಿಂದ ಕಣಕ್ಕಿಳಿದಿದ್ದೇನೆ. ಊರಲ್ಲಿ ಕೆಲವರು ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಸ್ಪರ್ಧೆಯಲ್ಲಿ ಇರುತ್ತೀನಾ, ಇಲ್ಲವಾ ನಾಮಪತ್ರ ಪರಿಶೀಲನೆ ನಂತರವೇ ಗೊತ್ತಾಗಬೇಕು’ ಎಂದು ಪೆದ್ದಪ್ಪ ವಿಜಯವಾಣಿ ಜತೆ ಪ್ರತಿಕ್ರಿಯಿಸಿದರು.
---