ಜಿಲ್ಲೆ

1356 ಕೋಟಿ ರೂ. ಕಾಮಗಾರಿಗಳಿಗೆ ಇಂದು ಮುಖ್ಯಮಂತ್ರಿ ಚಾಲನೆ

ಡಿ. ಎಂ. ಮಹೇಶ್

ದಾವಣಗೆರೆ: ಎರಡು ವರ್ಷ ಪೂರೈಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ದಾವಣಗೆರೆ ಜಿಲ್ಲೆಯಲ್ಲಿ ಏಕಕಾಲದಲ್ಲಿ ಬೃಹತ್ ಮೊತ್ತದ (1356 ಕೋಟಿ ರೂ.) ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಸೋಮವಾರ ಚಾಲನೆ ಸಿಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಟನ್ ಒತ್ತುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು, ಶಾಸಕರು, ಸಂಸದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮುಖ್ಯ ವೇದಿಕೆ ಸಜ್ಜಾಗಿದೆ. 40-100 ಅಡಿಯ ಸುತ್ತಳತೆಯ ವೇದಿಕೆಯಲ್ಲಿ, ಎರಡು ಸಾಲಿನಲ್ಲಿ ಒಟ್ಟು ನೂರು ಮಂದಿ ಗಣ್ಯರು ಕೂರಲು ಆಸನ ವ್ಯವಸ್ಥೆ ಇದೆ. ಮಳೆ ಭೀತಿ ಇರುವ ಹಿನ್ನೆಲೆಯಲ್ಲಿ ಜರ್ಮನ್ ಮಾದರಿಯ ಟೆಂಟ್ ಅಳವಡಿಸಲಾಗಿದೆ. ಅದರ ಎರಡೂ ಬದಿ ಪ್ರತ್ಯೇಕ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರಿಗೆ ಒಟ್ಟು 10750 ಕುರ್ಚಿಗಳನ್ನು ಹಾಕಲಾಗುತ್ತಿದೆ. ಮುಖ್ಯ ವೇದಿಕೆ ಹಿಂಬದಿ ಬ್ಯಾಕ್‌ಡ್ರಾಪ್ ಸೇರಿ ಕಾರ್ಯಕ್ರಮ ವೀಕ್ಷಣೆಗೆ ಅಲ್ಲಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಗಣ್ಯರಿಗಾಗಿ ವೇದಿಕೆ ಹಿಂಬದಿಯ ಮೊಬೈಲ್ ಶೌಚಗೃಹ ಹಾಗೂ ಹೈಸ್ಕೂಲ್, ಕಾಲೇಜಿನ ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ.

25 ಸಾವಿರ ಜನರಿಗೆ ಉಪಹಾರ

ನಗರಪಾಲಿಕೆ ಆವರಣದಲ್ಲಿ ಉಪಹಾರ ವಿತರಣೆಗೆ 30 ಕೌಂಟರ್ ತೆರೆಯಲಾಗುತ್ತಿದ್ದು ಬೆಳಗ್ಗೆ 11-30ರಿಂದಲೇ ಚಾಲನೆ ನೀಡಲಾಗುತ್ತಿದೆ. ಪಾಲಿಕೆ ಸುತ್ತಲಿನ ನಾಲ್ಕು ಕಬ್ಬಿಣದ ಗೇಟ್‌ಗಳನ್ನು ತೆರೆದಿಡಲಾಗುತ್ತಿದೆ. 25 ಸಾವಿರ ಜನರಿಗಾಗಿ ರೈಸ್‌ಬಾತ್-ಲಾಡು ವಿತರಣೆ ನಡೆಯುತ್ತಿದೆ.

ಇದಲ್ಲದೆ 5ರಿಂದ 10 ಸಾವಿರ ಜನರು ಹೆಚ್ಚುವರಿಯಾದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು. ಕುಡಿವ ನೀರು ಹಾಗೂ ವೇದಿಕೆ ಸುತ್ತಮುತ್ತಲಲ್ಲಿ 15 ಮೊಬೈಲ್ ಶೌಚಗೃಹ ವ್ಯವಸ್ಥೆ ಮಾಡಲಾಗುತ್ತಿದೆ. ಪಾಲಿಕೆ ಆವರಣದ ಶೌಚಗೃಹಗಳನ್ನೂ ಬಳಸಿಕೊಳ್ಳಲಾಗುತ್ತಿದೆ.

30 ಮಳಿಗೆಗಳಲ್ಲಿ ಪ್ರದರ್ಶನ

ಬಡಾವಣೆ ಠಾಣೆ ಭಾಗಕ್ಕೆ ಹೊಂದಿಕೊಂಡ ಶಾಲಾ ಮೈದಾನದಲ್ಲಿ ಒಟ್ಟು 30 ಮಳಿಗೆಗಳಲ್ಲಿ ವಿವಿಧ ಇಲಾಖೆಗಳಡಿ ಸಿಗುವ ಸೌಲಭ್ಯ ಕುರಿತು ಮಾಹಿತಿ ಮತ್ತು ಪ್ರದರ್ಶನ ಇರಲಿದೆ. ಗ್ಯಾರಂಟಿ ಯೋಜನೆಗಳಿಗೆಂದೇ ಪ್ರತ್ಯೇಕ ಮಳಿಗೆ ಸಿದ್ಧಗೊಂಡಿದೆ. ಸಿಎಂ ಇವುಗಳ ವೀಕ್ಷಣೆ ಮಾಡುವರು.

ಸಿಎಂ ದಿನಚರಿ

ಮಧ್ಯಾಹ್ನ 1ಕ್ಕೆ ನಗರಕ್ಕೆ ರಸ್ತೆ ಮಾರ್ಗದ ಮೂಲಕ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರು, ಡಾ.ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನದ ಅಂಗವಾಗಿ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿರುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸುವರು. ಕಲ್ಲೇಶ್ವರ ಇಂಡಸ್ಟ್ರೀಸ್ ಆವರಣದಲ್ಲಿ ಆಧುನಿಕ ತಂತ್ರಜ್ಞಾನದ ತೊಗರಿಬೇಳೆ, ಕಡ್ಲೆಬೇಳೆ ಮಿಲ್ಗಳಿಗೆ ಚಾಲನೆ ನೀಡುವರು. 1.45 ಕ್ಕೆ ಹೈಸ್ಕೂಲ್ ಮೈದಾನದಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವರು. 4 ಗಂಟೆಗೆ ಬೆಂಗಳೂರಿಗೆ ತೆರಳುವರು.

ಫಲಾನುಭವಿಗಳಿಗೆ ನೆರವು

ಕೃಷಿ ಇಲಾಖೆಯಡಿ 421 ರೈತರಿಗೆ 1.51 ಕೋಟಿ ರೂ. ಮೊತ್ತದ ಕೃಷಿ ಯಂತ್ರೋಪಕರಣಗಳು, ತೋಟಗಾರಿಕೆ ಇಲಾಖೆಯಡಿ 650 ರೈತರಿಗೆ 2 ಕೋಟಿ ರೂ. ಮೊತ್ತದ ಯಂತ್ರಗಳು, ಅಲ್ಪಸಂಖ್ಯಾತರ ನಿಗಮದಡಿ 2 ಟ್ಯಾಕ್ಸಿ, 2 ಆಟೊ, 15 ಕಾರುಗಳು ವಿತರಣೆ, ಕಾರ್ಮಿಕರ ಇಲಾಖೆೆಯಿಂದ 1 ಸಾವಿರ ಸಲಕರಣೆಗಳ ವಿತರಣೆ, ಅಂಗವಿಕಲರ ಇಲಾಖೆಯಿಂದ 16 ಮಂದಿಗೆ ವಾಹನಗಳ ವಿತರಣೆ ನಡೆಯಲಿದೆ. 500 ಬಡವರಿಗೆ ಪೋಡು ಪತ್ರಗಳು, ಕೊಳೆಗೇರಿ ಅಭಿವೃದ್ಧಿ ನಿಗಮದಿಂದ ಅರ್ಹರಿಗೆ ವಸತಿ ಸೌಲಭ್ಯಗಳ ವಿತರಣೆ ಕಾರ್ಯ ನಡೆಯಲಿದೆ.

ಯಾವ ಕಾಮಗಾರಿಗಳಿಗೆ ಗ್ರೀನ್‌ಸಿಗ್ನಲ್?

ಪೌರಕಾರ್ಮಿಕರ ವಿಶ್ರಾಂತಿ ಗೃಹ, ಇಂದಿರಾ ಕ್ಯಾಂಟೀನ್, 24*7 ನೀರು ಸರಬರಾಜು ಕಾಮಗಾರಿ, ಪ್ರಧಾನ ಮಂತ್ರಿ ಅವಾಸ್ ಸ್ ಯೋಜನೆಯಡಿ ಮನೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ವಿವೇಕ ಯೋಜನೆಯಡಿ 23 ಕಾಲೇಜು ಕಟ್ಟಡ ನಿರ್ಮಾಣ, ಚಿಗಟೇರಿ ಜಿಲ್ಲಾಸ್ಪತ್ರೆಯ ಕ್ರಿಟಿಕಲ್ ಕೇರ್ ಕಟ್ಟಡದ ಶಂಕುಸ್ಥಾಪನೆ, ಜಿಲ್ಲಾ ಆಯುಷ್ ಕಚೇರಿ, ಸಂಯುಕ್ತ ಆಯುಷ್ ಆಸ್ಪತ್ರೆ, ಪಶು ಚಿಕಿತ್ಸಾಲಯ ಮತ್ತು ಪ್ರಾಣಿ ರೋಗ ಪ್ರಯೋಗಾಲಯ, ಜಿಲ್ಲಾ ಗ್ರಂಥಾಲದ ನೂತನ ಕಟ್ಟಡಕ್ಕೆ ಶಂಕುಸ ಶಂಕುಸ್ಥಾಪನೆ, ಹೊನ್ನಾಳಿ-ನ್ಯಾಮತಿಯಲ್ಲಿ ಪ್ರವಾಸಿಮಂದಿರ ಕಟ್ಟಡ, ಗ್ರಾಮೀಣ ಗ್ರಂಥಾಲಯ ಕಟ್ಟಡ, ಪಿಎಚ್‌ಸಿ ಕಟ್ಟಡಗಳ ಉದ್ಘಾಟನೆ.

2 ಸಾವಿರ ಪೊಲೀಸರ ನಿಯೋಜನೆ

ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿ ಒಟ್ಟು 2 ಸಾವಿರ ಪೊಲೀಸ್ ಅಧಿಕಾರಿ-ಸಿಬ್ಬಂದಿ ನಿಯೋಜನೆಯೊಂದಿಗೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. 5 ಕೆಎಸ್‌ಆರ್‌ಪಿ ತುಕಡಿ, 7 ಡಿಎಆರ್, 3 ಕ್ಷಿಪ್ರ ಕಾರ್ಯಪಡೆ, 1 ದುರ್ಗಾಪಡೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ವೇದಿಕೆ ಸುತ್ತ ಹಾಗೂ ಸಂಚಾರ ನಿರ್ಬಂಧವಿರುವೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಸಂಚಾರ ಮಾರ್ಗ ಬದಲಾವಣೆ:

ಸಿಎಂ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ದಾವಣಗೆರೆ ನಗರದ ವಿವಿಧೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ. ದೊಡ್ಡಬಾತಿ ಮುಖಾಂತರ ಬರುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಶಿವಮೊಗ್ಗ ಬೈಪಾಸ್ ಮೂಲಕ ಬಾಡಾ ಕ್ರಾಸ್ ಹಾದು ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬರುವುದು. ಚಿತ್ರದುರ್ಗ, ಸಂತೆಬೆನ್ನೂರು (ಬೀರೂರು-ಸಮ್ಮಸಗಿ ರಸ್ತೆ) ಮಾರ್ಗವಾಗಿ ಬಸ್‌ಗಳು ಆವರಗೆರೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬರುವುದು. ಜಗಳೂರು ಮತ್ತು ಕಂಚಿಕೆರೆ ಮಾರ್ಗದ ಬಸ್‌ಗಳು ಬೇತೂರು ಹಳ್ಳದ ಹತ್ತಿರದ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬರುವುದು. ಚನ್ನಗಿರಿ-ಹದಡಿ ಮಾರ್ಗದ ಬಸ್‌ಗಳು ಹದಡಿ ಅಂಡರ್‌ಪಾಸ್ ಮೂಲಕ ಮಾಗನೂರು ಬಸಪ್ಪ ಮೈದಾನ ತಲುಪುಬೇಕು.

ಭಾರೀ ಮತ್ತು ಲಘು ಗೂಡ್ಸ್ ವಾಹನಗಳು ದಾವಣಗೆರೆಯ ಹಳೇ ಪಿ.ಬಿ ರಸ್ತೆಯ ಆಯುರ್ವೇದಿಕ್ ಕಾಲೇಜಿನಿಂದ ಡಿ.ಸಿ.ಎಂ ಅಂಡರ್ ಬ್ರಿಡ್ಜ್‌ವರೆಗೆ ಹಾಗೂ ನಗರದ ಹದಡಿ ರಸ್ತೆಯಲ್ಲಿ ಐ.ಟಿ.ಐ ಕಾಲೇಜ್ ವೃತ್ತದಿಂದ ಜಯದೇವ ವೃತ್ತ್ತ ಕಡೆಗೆ ಹಾಗೂ ಶಾಮನೂರು ರಸ್ತೆಯಲ್ಲಿ ಶಾಮನೂರು ಅಂಡರ್ ಬ್ರಿಡ್ಜ್‌ನಿಂದ ಲಕ್ಷ್ಮೀಫ್ರೋರ್ ಮಿಲ್ ಶಾರದಾಂಬ ದೇವಸ್ಥಾನ ವೃತ್ತದ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅಂದು ಖಾಸಗಿ ಬಸ್‌ಗಳು ಕಾರ್ಯ ನಿರ್ವಹಿಸದೆ ಎಪಿಎಂಸಿ, ಮಾಗನೂರು ಬಸಪ್ಪ ಮೈದಾನದಿಂದ ಕಾರ್ಯ ನಿರ್ವಹಿಸಬೇಕು.

ಪಾರ್ಕಿಂಗ್ ವ್ಯವಸ್ಥೆ

ಕಾರ್ಯಕ್ರಮಕ್ಕೆ ಬರುವ ಬಸ್‌ಗಳಿಗೆ ಖಾಸಗಿ ಬಸ್ ನಿಲ್ದಾಣ, ಅರುಣ ವೃತ್ತದಿಂದ ವಿನೋಬನಗರ ಮೂರನೇ ಮುಖ್ಯರಸ್ತೆಯ ಎಡಭಾಗ, ಪುಷ್ಪಾಂಜಲಿ ಚಿತ್ರಮಂದಿರದಿಂದ ಈರುಳ್ಳಿ ಮಾರುಕಟ್ಟೆವರೆಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಬೀರಲಿಂಗೇಶ್ವರ ದೇವಸ್ಥಾನ ಆವರಣ, ಆರ್.ಎಲ್. ಕಾನೂನು ಕಾಲೇಜಿನ ಹಿಂಬದಿಯ ಮೈದಾನದಲ್ಲಿ ದ್ವಿಚಕ್ರವಾಹನಗಳು, ಹೊಳೆಹೊನ್ನೂರು ತೋಟದಲ್ಲಿ ನಾಲ್ಕುಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.