ಜಿಲ್ಲೆ

ಸ್ವಚ್ಛತೆಯಲ್ಲಿ ಮೊದಲಿಗನಾಗಲಿ ದಾವಣಗೆರೆ   ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಶಯ

ಡಿ. ಎಂ. ಮಹೇಶ್

ದಾವಣಗೆರೆ: ಪೌರಕಾರ್ಮಿಕರ ಶ್ರಮದಿಂದಾಗಿ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿರುವ ದಾವಣಗೆರೆ ಮಹಾನಗರ ಪಾಲಿಕೆ ಮುಂದಿನ ದಿನಗಳಲ್ಲಿ ನಂಬರ್ 1 ಸ್ಥಾನ ಬರಲು ಶ್ರಮಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಶಿಸಿದರು.  
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೇರ ಪಾವತಿ ಪೌರ ಕಾರ್ಮಿಕರಿಗೆ ಕಾಯಮಾತಿ ಆದೇಶಪ್ರತಿ, ಶೇ.5 ರ ಯೋಜನೆಯಡಿ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಮತ್ತು ಜೆರಾಕ್ಸ್ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ಪೌರಕಾರ್ಮಿಕರು ನಗರ ಸ್ವಚ್ಛತೆ ವೇಳೆ ತಮ್ಮ ಆರೋಗ್ಯ ಸುರಕ್ಷತೆ ಕಡೆಗೂ ಗಮನ ಹರಿಸಿ ಕಾರ್ಯನಿರ್ವಹಿಸಬೇಕು. ಈ ಹಿಂದೆ ಪೌರಕಾರ್ಮಿಕರಿಗಾಗಿ ಆರೋಗ್ಯ ಶಿಬಿರ ನಡೆಸಲಾಗಿತ್ತು. ಮುಂದಿನ ದಿನದಲ್ಲೂ ನಿಮ್ಮ ಆರೋಗ್ಯ ಮತ್ತು ವಸತಿ ಸಮಸ್ಯೆ ಪರಿಹರಿಸಲು ನಾವಿದ್ದೇವೆ. ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ಹೇಳಿದರು.
ಪಾಲಿಕೆಯಿಂದ ಪೌರಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಉನ್ನತ ಶಿಕ್ಷಣ ಪಡೆದವರಿಗೆ ಲ್ಯಾಪ್‌ಟಾಪ್ ಒದಗಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದ್ದು, ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ 2002ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಡಿ 270 ಜನ ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಗುತ್ತಿಗೆದಾರರು ಸಕಾಲಕ್ಕೆ ವೇತನ ಪಾವತಿಸದ್ದರಿಂದ 2017ರಲ್ಲಿ ನಮ್ಮ ಸರ್ಕಾರವೇ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ನೇರ ವೇತನ ಪಾವತಿಗೆ ಆದೇಶಿಸಿತ್ತು ಎಂದು ಸ್ಮರಿಸಿದರು.
2019ರಲ್ಲಿ 34, 2023ರಲ್ಲಿ 106 ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿತ್ತು. ಈ ಸಾಲಿನಲ್ಲಿ 100 ಮಂದಿಗೆ ನೇಮಕಾತಿ ಆದೇಶ ನೀಡಲಾಗುತ್ತಿದೆ. ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ 381 ಪೌರ ಕಾರ್ಮಿಕರಿಗೆ ಹಾಗೂ ಇತರೆ ಸ್ವಚ್ಛತಾ ಸಿಬ್ಬಂದಿಗೆ 40 ಕೋಟಿ ರೂ. ವೆಚ್ಚದಲ್ಲಿ ವಸತಿ ಕಟ್ಟಡ ನಿರ್ಮಿಸಿ ಸ್ವಾಧೀನ ಪತ್ರಗಳನ್ನು ಹಂಚಿಕೆ ಮಾಡಲಾಗಿದೆ.
ಪೌರ ಕಾರ್ಮಿಕರಿಗೆ ಸಮವಸ್ತ್ರ, ಶೂ, ರಿಫ್ಲೆಕ್ಟ್ಟಿಂಗ್ ಚಾಕೆಟ್, ಸ್ವೆಟರ್, ರೇನ್‌ಕೋಟ್‌ಗಳನ್ನು, ಹ್ಯಾಂಡ್‌ಗ್ಲೌಸ್, ಮಾಸ್ಟ್ ಗಂಬೂಟ್ ಹಾಗೂ ಇತರೆ ಸುರಕ್ಷಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಶೇ.5ರ ಯೋಜನೆಯಡಿ 94 ಅವಲಂಬಿತ ವಿಕಲಚೇತನ ಮಕ್ಕಳಿಗೆ ಅಂದಾಜು 5300 ರೂ.ನಂತೆ  ಪೋಷಣಾ ಭತ್ಯೆ ಹಾಗೂ 27 ವಿಕಲಚೇತನ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಮೌನೇಶ್ವರಿ ಶ್ರವಣ ನ್ಯೂನ್ಯತಾ ವಸತಿ ಶಾಲೆಗೆ ಮೂಲ ಸೌಕರ್ಯ ಕೈಗೊಳ್ಳಲು ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಪಾಲಿಕೆಯ ಶೇ.5ರ ಯೋಜನೆಯಡಿ ವಿಕಲಚೇತನರಿಗೆ 29 ರೆಟ್ರೋಫಿಟ್‌ಮೆಂಟ್ ತ್ರಿಚಕ್ರ ವಾಹನ ಹಾಗೂ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುವ ಅಂಗವಿಕಲ ನಗರ ಪುನರ್ವಸತಿ ಕಾರ್ಯಕರ್ತರಿಗೆ ಕುರ್ಚಿ, ಟೇಬಲ್, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ಪ್ರಿಂಟರ್‌ಗಳನ್ನು ವಿತರಿಸಲಾಯಿತು.
ಮೇರ್ ವಿನಾಯಕ ಪೈಲ್ವಾನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ಎಲ್.ಡಿ.ಗೋಣೆಪ್ಪ, ಜಾಕೀರ್ ಅಲಿ, ಸೋಗಿ ಶಾಂತಕುಮಾರ್, ಹುಲ್ಮನಿ ಗಣೇಶ್, ಜಯಮ್ಮ ಗೋಪಿನಾಯ್ಕ, ರಹೀಂಸಾಬ್, ಮುಖಂಡ ದಿನೇಶ್ ಕೆ.ಶೆಟ್ಟಿ,
ಪೌರ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎಲ್.ಎಂ.ಹನುಮಂತಪ್ಪ, ಎಲ್.ಎಚ್. ಸಾಗರ್, ಪಾಲಿಕೆ ಆಯುಕ್ತೆ ರೇಣುಕಾ, ಕಾರ್ಯಪಾಲಕ ಇಂಜಿನಿಯರ್ ಉದಯಕುಮಾರ್, ವ್ಯವಸ್ಥಾಪಕ ನಾಗರಾಜ ಇತರರಿದ್ದರು.
---