ದಾವಣಗೆರೆ: ದಾವಣಗೆರೆಯನ್ನು ರಾಜ್ಯದಲ್ಲಿಯೇ ಮಾದರಿ ಹಾಗೂ ಅಭಿವೃದ್ಧಿ ಹೊಂದಿದ ನಗರವನ್ನಾಗಿಸಲು ಪ್ರತಿಯೊಬ್ಬರೂ ಶಾಂತಿ, ಸೌಹಾರ್ದ ಕಾಪಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಒಗ್ಗಟ್ಟಿನಿಂದ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಜಿಲ್ಲಾಡಳಿತದಿಂದ ಮಾರ್ಗಸೂಚಿ ರೂಪಿಸಲಾಗುವುದು ಎಂದು ತಿಳಿಸಿದರು.
ಗಣೇಶ ಮೆರವಣಿಗೆ ಸೇರಿ ಇತರೆ ಸಮುದಾಯದವರು ನಡೆಸುವ ಮೆರವಣಿಗೆಯಲ್ಲಿ ನಡೆಯುವ ಸಣ್ಣ ಘಟನೆಗಳು ಸಮಾಜಕ್ಕೆ ಬಹಳ ದೊಡ್ಡ ನಷ್ಟ ಉಂಟು ಮಾಡುತ್ತವೆ. ಈ ಹಿಂದೆ 1991-92 ರಲ್ಲಿ ನಡೆದ ಸಣ್ಣ ಘಟನೆಯಿಂದ ಜನರು ಅನೇಕ ಸಂಕಷ್ಟ ಎದುರಿಸುವಂತಾಯಿತು ಎಂದರು.
ನಗರದಲ್ಲಿ ಇತ್ತೀಚೆಗೆ ಅರಳಿಮರ ವೃತ್ತದಲ್ಲಿ ಘಟನೆ ನಡೆದ ತಕ್ಷಣ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ನಿಯಂತ್ರಿಸಿದೆ. ಮುಂದೆ ಈ ರೀತಿ ಯಾವುದೇ ಘಟನೆಗಳು ನಡೆಯಬಾರದು. ಶಾಂತಿ ಕದಡಿದರೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ. ಅವರ ಕಾರ್ಯದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಜಿಲ್ಲೆಯ ಎಲ್ಲೆಡೆ ಶಾಂತಿಯುತ ವಾತಾವರಣವಿದೆ. ಈಗಾಗಲೇ ಮಲೆಬೆನ್ನೂರು, ಚನ್ನಗಿರಿಯಲ್ಲಿ ಗಣೇಶನ ಉತ್ಸವಗಳು ಬಹಳ ಸೌಹಾರ್ದಯುತವಾಗಿ ಮುಗಿದಿವೆ. ನಗರದಲ್ಲಿ ಇನ್ನೂ ಅನೇಕ ಗಣೇಶನ ಮೆರವಣಿಗೆ ಹಾಗೂ ವಿಜಯದಶಮಿ ಹಬ್ಬವಿದ್ದು, ಎಲ್ಲರೂ ಸೌಹಾರ್ದವಾಗಿ ಇರಬೇಕು ಎಂದು ತಿಳಿಸಿದರು.
ನಗರದಲ್ಲಿ ಈಗಾಗಲೇ 500 ಕ್ಕಿಂತ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಸರ್ವೆಲೆನ್ಸ್ ಮಾಡುತ್ತಿದ್ದು, ನಗರ ಪ್ರವೇಶಿಸುವ ಎಲ್ಲ ಮಾರ್ಗ, ವೃತ್ತ, ಸಂಪರ್ಕ ರಸ್ತೆ ಸೇರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಸಿಟಿವಿ ಹೆಚ್ಚಳ ಮಾಡಲಿದ್ದು, ಯಾವುದೇ ಕಿಡಿಗೇಡಿಗಳು ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಯಾವುದೇ ಪಕ್ಷವಾಗಿರಲಿ ಸ್ನೇಹತ್ವದ ವಾತಾವರಣದಿಂದ ಮನಗಳನ್ನು ಗೆಲ್ಲಬೇಕು. ಪ್ರಚೋದನಾಕಾರಿ ಹೇಳಿಕೆಗಳಿಗೆ ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಮೆರವಣಿಗೆಗಳಲ್ಲಿ ಡಿಜೆ ಬದಲಾಗಿ ಜಾನಪದ ಮೇಳ, ಸ್ಥಳೀಯ ಕಲಾತಂಡಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವುದರಿಂದ ಯಾರಿಗೂ ಲಾಭವಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಗಳಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.
ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, ಇತ್ತೀಚೆಗೆ ನಡೆದ ಘಟನೆಯಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. 6 ಪ್ರಕರಣ ದಾಖಲು ಮಾಡಿ 50 ಜನರನ್ನು ಬಂಧಿಸಲಾಗಿದೆ. ಇನ್ನೂ ಕೆಲವರಿಗೆ ಶೋಧ ಕಾರ್ಯ ನಡೆದಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕುರಿತಂತೆ 8 ಪ್ರಕರಣ ದಾಖಲಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಕಟ್ಟಿಟ್ಟಬುತ್ತಿ, ಭಾಗಿಯಾಗದವರು ಯಾವುದೇ ಆತಂಕವಿಲ್ಲದೇ ಇರಬಹುದೆಂದರು.
ಮುಖಂಡರಾದ ಡಿ.ಬಸವರಾಜ್, ಎಸ್.ಟಿ.ವೀರೇಶ್, ವೈ.ಮಲ್ಲೇಶ್, ನಜೀರ್ ಅಹಮದ್, ಸೋಮ್ಲಾಪುರ ಹನುಮಂತಪ್ಪ, ಸೈಯದ್ ಸೈಫುಲ್ಲಾ ಸೇರಿ ಅನೇಕ ಮುಖಂಡರು ಶಾಂತಿ, ಸೌಹಾರ್ದತೆಗೆ ಸಲಹೆ ನೀಡಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಎಎಸ್‌ಪಿ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಇದ್ದರು.
----