ದಾವಣಗೆರೆ: ಬಕ್ರೀದ್ ಹಬ್ಬವನ್ನು ಸಾಮರಸ್ಯ- ಸೌಹಾರ್ದವಾಗಿ ಆಚರಿಸಬೇಕು. ಪ್ರಾಣಿ ವಧೆ ಸಂಬಂಧಿಸಿದ ಕಾನೂನನ್ನು ಎಲ್ಲರೂ ಪಾಲಿಸಬೇಕು. ಗೋವುಗಳ ಸಾಗಣೆ ವಿಚಾರದಲ್ಲಿ ನೈತಿಕ ಪೊಲೀಸ್‌ಗಿರಿ ಮಾಡುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದರು.
ಜೂ.17ರಂದು ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹಬ್ಬದ ವೇಳೆ ಯಾರೂ ಕಾನೂನು ಕೈಗೆತ್ತಿಕೊಳ್ಳುವ ರೀತಿ ವರ್ತಿಸಬಾರದು. ಯಾವುದೇ ಸಮಸ್ಯೆಗಳಿದ್ದರೂ ಪೊಲೀಸರ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾವನೆಗೆ ಧಕ್ಕೆ ತರುವ ರೀತಿಯ ಹೇಳಿಕೆಗಳಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ಹೇಳಿದರು.
ಬಕ್ರೀದ್ ಹಬ್ಬದ ದಿನ ಪ್ರಾರ್ಥನೆಗೆ ಸೇರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಮತ್ತು ಸಂಚಾರ ನಿಯಂತ್ರಣ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಹಬ್ಬದ ದಿನ ಕಸ ವಿಲೇವಾರಿಗಾಗಿ ಅಗತ್ಯವಿರುವ ಕಡೆಗಳಲ್ಲಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ವ್ಯವಸ್ಥೆ ಮಾಡಲಾಗುವುದು. ಕುಡಿವ ನೀರು ಹಾಗೂ ಬೆಳಕಿನ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲಾಗುವುದು. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ಜೆ. ಅಮಾನುಲ್ಲಾ ಖಾನ್, ಚನ್ನಬಸಪ್ಪ ಗೌಡ, ಟಿ. ಅಸ್ಗರ್, ಕೆ.ಬಿ. ಶಂಕರನಾರಾಯಣ, ವೈ. ಮಲ್ಲೇಶ್, ಮೊಹಮ್ಮದ್ ಅಲಿ ಶೊಹೇಬ್, ಕೋಳಿ ಇಬ್ರಾಹಿಂ, ಸತೀಶ್ ಪೂಜಾರ್, ಮೊಹಮ್ಮದ್ ಜಾಫರ್, ಮೈನುದ್ದೀನ್ ಪಾಷಾ ಮೊದಲಾದವರು ಸಲಹೆಗಳನ್ನು ನೀಡಿದರು.
ಈ ಸಭೆಯಲ್ಲಿ ಎಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಮಂಜುನಾಥ್, ಬೆಸ್ಕಾಂ ಅಧಿಕಾರಿ ಕೋಮಲಾ ಇತರರಿದ್ದರು.
ಅಮಾಯಕರ ವಿರುದ್ಧ ಕ್ರಮ ಬೇಡ
ಕೆಲವೊಮ್ಮೆ ಪೊಲೀಸರು ಒತ್ತಡದಿಂದ ಅಮಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಘಟನೆಗಳು ನಡೆದಿವೆ. ನಿರಪರಾಧಿ ಎಂದು ಸಾಬೀತಾಗಲು ಹಲವು ವರ್ಷಗಳೇ ಬೇಕಾಗಲಿವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ನಿರಪರಾಧಿಗಳಿಗೆ ಶಿಕ್ಷೆ ಬೇಡ ಎಂದು ಮುಖಂಡ ಫಯಾಜ್ ಅಹಮದ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಅಮಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಿರ್ದಿಷ್ಟ ಪ್ರಕರಣಗಳಿದ್ದಲ್ಲಿ ಮಾಹಿತಿ ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು. ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ನಮ್ಮದೂ ಒತ್ತಾಸೆ. ಇಷ್ಟಾದರೂ, ನ್ಯಾಯಾಲಯದಲ್ಲಿ ಯಾರಾದರೂ ಖುಲಾಸೆ ಆದರೆ ಅವರು ತಪ್ಪೇ ಮಾಡಿರಲಿಲ್ಲ ಎಂದಲ್ಲ. ಸಾಕ್ಷಿಗಳು ತಿರುಗಿ ಬಿದ್ದಿರುವುದೂ ಸೇರಿ ಹಲವು ಕಾರಣಗಳಿಗೆ ಖುಲಾಸೆಯಾಗಿರುತ್ತಾರೆ ಎಂದರು.
ವಸಂತ ಟಾಕೀಸ್ ಬಳಿ ಕೋಳಿ ಅಂಗಡಿಗಳ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಇದರಿಂದಾಗಿ ನಾಯಿಗಳ ಕಾಟ ಹೆಚ್ಚಾಗಿದೆ. ಇದು ಜಗಳಗಳಿಗೂ ಕಾರಣವಾಗುತ್ತಿದೆ. ಅಂಗಡಿಯವರು ತ್ಯಾಜ್ಯ ವಿಲೇವಾರಿಗೆ ನಿಗಾ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖಂಡ ಕೋಳಿ ಇಬ್ರಾಹಿಂ, ಪ್ರತಿ ಕೋಳಿ ಅಂಗಡಿಯಿಂದ ಕೋಳಿ ತ್ಯಾಜ್ಯವನ್ನು ಸಂಗ್ರಹಿಸಿ ಹುಬ್ಬಳ್ಳಿಗೆ ಕಳಿಸಲಾಗುತ್ತಿದೆ. ಎಲ್ಲೂ ತ್ಯಾಜ್ಯ ಹರಡುತ್ತಿಲ್ಲ ಎಂದು ಹೇಳಿದರು.
---