ಡಿ.ಎಂ.ಮಹೇಶ್, ದಾವಣಗೆರೆ
ತಾಲೂಕಿನ ಆವರಗೊಳ್ಳ ಗ್ರಾಮದ ಕಸ ಸಂಗ್ರಹಣಾ ಘಟಕದಲ್ಲಿ ನಿತ್ಯ ಡಂಪಿಂಗ್ ಆಗುವ ಕಸದ ರಾಶಿ ಸಮಸ್ಯೆಗೆ ಮಂಗಳ ಹಾಡಲು ದಾವಣಗೆರೆ ನಗರಪಾಲಿಕೆ ಸಜ್ಜಾಗಿದೆ. ಹಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ‘ಸಿಟಿ ಕಾಂಪೋಸ್ಟ್’ ತಯಾರಿಸುವ ಘಟಕ ಆರಂಭಿಸುವ ತುದಿಗಾಲಲ್ಲಿದೆ.
ಆವರಗೊಳ್ಳದ 4 ಎಕರೆ ಜಾಗದಲ್ಲಿ ವಿದ್ಯುತ್ ಚಾಲಿತ ವಿಂಡ್ರೋ ಕಾಂಪೋಸ್ಟಿಂಗ್ ಘಟಕ ತಲೆ ಎತ್ತಿದೆ. ದಿನಕ್ಕೆ 200 ಟನ್ ಗೊಬ್ಬರ ತಯಾರಿಸುವ ಸಾಮರ್ಥ್ಯ ಹೊಂದಿದೆ. ಟ್ರಯಲ್ ಹಂತದ ಈ ಘಟಕ 15 ದಿನದಲ್ಲಿ ಕಾರ್ಯಾರಂಭ ಮಾಡಲಿದೆ.
ಸ್ವಚ್ಛ ಭಾರತ್ ಮಿಷನ್‌ನಡಿ 4 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಟ್ರಾಮೆಲ್ ಯಂತ್ರಗಳು ಇಲ್ಲಿಗೆ ಬಂದಿವೆ. 100 ಮಿಮೀನಿಂದ ಹಿಡಿದು 36, 16 ಹಾಗೂ 4 ಮಿಮೀ ಹಂತದವರೆಗೆ ಕಸವನ್ನು ಅನುಕ್ರಮವಾಗಿ ಯಂತ್ರಗಳ ಜರಡಿಯಲ್ಲಿ ಸೋಸುವ ಮೂಲಕ ತೂಕ ಇಳಿಸಲಾಗುವುದು. ನಂತರ ಅದು ಗೊಬ್ಬರವಾಗಿ ಮಾರ್ಪಾಡಾಗಲಿದೆ.
ಸಂಗ್ರಹಿತ ಕಸದಿಂದ ಗರಿಷ್ಠ 40 ದಿನದಲ್ಲಿ ಕಡಿಮೆ ತೇವಾಂಶದ ಕಾಂಪೋಸ್ಟ್ ಮಾಡಬಹುದು. ವಾತಾವರಣ ಪೂರಕವಿರದಿದ್ದಲ್ಲಿ ಜೈವಿಕ ರಸಾಯನ ಸಿಂಪಡಿಸಿಯೂ ಕಸವನ್ನು ಕೊಳೆಸಲಾಗುತ್ತದೆ. 100 ಟನ್ ಹಸಿ ಕಸದಿಂದ ಸುಮಾರು 20 ಟನ್ ಗೊಬ್ಬರ ಉತ್ಪತ್ತಿಯಾಗುವ ಅಂದಾಜಿದೆ. ಸರ್ಕಾರದ ರಸಗೊಬ್ಬರ ನಿಯಂತ್ರಣ ಆದೇಶದನ್ವಯ ಇದರ ಉತ್ಪಾದನೆ ಇರಲಿದೆ.
ಆವರಗೊಳ್ಳದ ಕಸ ಸಂಗ್ರಹಣಾ ಘಟಕದಲ್ಲಿ ಕಸದ ಗುಡ್ಡೆಯನ್ನು ವರ್ಷಕ್ಕೊಮ್ಮೆ ಬೃಹತ್ ಯಂತ್ರದ ಮೂಲಕ ವಿಲೇ ಮಾಡಲಾಗುತ್ತಿತ್ತು. ಇದಕ್ಕೆ 20 ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ ಗೊಬ್ಬರ ತಯಾರಿಕೆಯಿಂದಾಗಿ ವೆಚ್ಚ ತಗ್ಗುವ ಲಕ್ಷಣಗಳಿವೆ. ಈ ಘಟಕದ ನಿರ್ವಹಣೆಗೆ ಶೀಘ್ರವೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ವಿಂಗಡಣೆ ನಡುವೆಯೂ ಒಮೊಮ್ಮೆ ಒಣ ಕಸ ಬರುವ ಸಾಧ್ಯತೆ ಇದೆ. ಇದನ್ನು ಒಗ್ಗೂಡಿಸಲು ಹಾರಿಜೊಂಟಲ್ ಬೇಲಿಂಗ್ ಪ್ರೆಸ್ ಯಂತ್ರ ಹಾಗೂ ಗೊಬ್ಬರವನ್ನು ಚೀಲಕ್ಕೆ ತುಂಬುವ ಬ್ಯಾಗಿಂಗ್ ವಿಭಾಗವೂ ಕಾರ್ಯ ನಿರ್ವಹಿಸಲಿದೆ. ಘಟಕ ನಿರ್ವಹಣೆ, ಗಿಒಬ್ಬರ ಮಾರಾಟ ಹೊಣೆ ಏಜೆನ್ಸಿಗೆ ನೀಡಲಾಗುತ್ತಿದೆ. ಸುಮಾರು 35 ಜನರಿಗೆ ಹೊರಗುತ್ತಿಗೆ ಕೆಲಸ ಸಿಗಲಿದೆ.
ಪರಿಸರ ಮಾಲಿನ್ಯಕ್ಕೆ ಬ್ರೇಕ್
ದಾವಣಗೆರೆಯ 45 ವಾರ್ಡ್‌ಗಳಿಂದ ದಿನವೊಂದಕ್ಕೆ 170 ಟನ್ ತ್ಯಾಜ್ಯ ಉತ್ಪತ್ತಿಯಾದರೆ ಅದರಲ್ಲಿ ಹಸಿ ಕಸದ ಪ್ರಮಾಣವೇ 100 ಟನ್! ಉಳಿದಂತೆ 60 ಟನ್ ಒಣ ತ್ಯಾಜ್ಯ, 8 ಟನ್ ಹೂಳು, 2-3 ಟನ್ ಅಪಾಯಕಾರಿ ತ್ಯಾಜ್ಯ ಇರಲಿದೆ. ನಗರದಿಂದ ನಿತ್ಯ 11 ಕಾಂಪ್ಯಾಕ್ಟರ್, 25 ಟ್ರಾೃಕ್ಟರ್‌ಗಳಲ್ಲಿ ತ್ಯಾಜ್ಯವು ಆವರಗೊಳ್ಳದ ಕಸದ ಘಟಕಕ್ಕೆ ರವಾನೆಯಾಗುತ್ತಿದೆ.
ಅತ್ತ ಕಸಕ್ಕೆ ಹಚ್ಚಿದ ಬೆಂಕಿ, ಇಲ್ಲವೇ ನಾರುವ ದುರ್ವಾಸನೆ ಹಾಗೂ ನಾಯಿಗಳ ಉಪಟಳದಿಂದ ಗ್ರಾಮಸ್ಥರು ಹೈರಾಣಾಗಿದ್ದರು. ಗೊಬ್ಬರ ಘಟಕ ಆಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಬೀಳಲಿದೆ. ಸುತ್ತಮುತ್ತಲ ರೈತರಿಗೆ ಟನ್ ಗೊಬ್ಬರಕ್ಕೆ ಸುಮಾರು 1 ಸಾವಿರ ರೂ ನಿಗದಿಯಾಗುವ ಸಾಧ್ಯತೆ ಇದೆ. ಹೀಗಾಗಿ ಆವರಗೊಳ್ಳ ಜನರಲ್ಲಿ ನಿರಾಳತೆ ಇನ್ನಷ್ಟೇ ಮೂಡುವ ಆಶಾಭಾವನೆ ಇದೆ.
ಕರೂರಲ್ಲಿ ಸಾಲಿಡ್ ವೇಸ್ಟ್ ಸಂಸ್ಕರಣೆ
ಇನ್ನೊಂದೆಡೆ ದಿನಕ್ಕೆ 100 ಟನ್ ಒಣ ಕಸವನ್ನು ಸಂಸ್ಕರಣೆ ಮಾಡುವ ಉದ್ದೇಶದಿಂದ ಹೊರವಲಯದ ಕರೂರು ಗ್ರಾಮದ 1.25 ಎಕರೆ ಜಾಗದಲ್ಲಿ ಘಟಕ (ಮೆಟಿರಿಯಲ್ ರಿಕವರಿ ಫೆಸಿಲಿಟಿ) ಸ್ಥಾಪಿಸುವ ಇರಾದೆಯಲ್ಲಿದೆ ನಗರಪಾಲಿಕೆ.
5 ಕಾಂಪ್ಯಾಕ್ಟರ್‌ಗಳು ಪ್ಲಾಸ್ಟಿಕ್, ಪೇಪರ್, ಕಾರ್ಡ್‌ಬೋರ್ಡ್, ಗ್ಲಾಸ್, ಮೆಟಲ್ ಇತ್ಯಾದಿ ಒಣ ಕಸವನ್ನು ಸಂಗ್ರಹಿಸಿ ಈ ಘಟಕಕ್ಕೆ ನೀಡುವ ಉದ್ದೇಶವಿದೆ. ನಂತರ ಅವನ್ನು ಪರವಾನಗಿ ಪಡೆದ ಮರು ಬಳಕೆದಾರರಿಗೆ ರವಾನೆ ಮಾಡಿದಲ್ಲಿ ಪಾಲಿಕೆಗೆ ತುಸು ಆದಾಯ ಬರುವ ನಿರೀಕ್ಷೆ ಇದೆ. ಮರುಬಳಕೆಯಾಗದ ಕೆಲವು ಪ್ಲಾಸ್ಟಿಕ್ ತ್ಯಾಜ್ಯಗಳು ನಗರಪಾಲಿಕೆ ಒಪ್ಪಂದ ಮಾಡಿಕೊಂಡ ಸಿಮೆಂಟ್ ಕಾರ್ಖಾನೆಗಳಿಗೆ ತಲುಪಲಿವೆ.
ಬರಲಿದೆ ಇನ್ಸಿನರೇಟರ್ ಯಂತ್ರ
ಡೈಪರ್ ಹಾಗೂ ಸ್ಯಾನಿಟರಿ ಪ್ಯಾಡ್ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ದಹನ ಮಾಡುವ ಸುಮಾರು 30 ಲಕ್ಷ ರೂ. ವೆಚ್ಚದ ಇನ್ಸಿನರೇಟರ್ ಯಂತ್ರ ಕೂಡ ನಗರಪಾಲಿಕೆಗೆ ಶೀಘ್ರವೇ ಬರಲಿದೆ. ದಿನಕ್ಕೆ 2 ಟನ್ ಸಾಮರ್ಥ್ಯದಲ್ಲಿ ಸ್ಯಾನಿಟರಿ ತ್ಯಾಜ್ಯಗಳನ್ನು ಸುಟ್ಟು ಹಾಕಲಿದೆ. ಇದಲ್ಲದೆ ಗ್ಲಾಸ್, ಇನ್ನಿತರೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಲ್ಯಾಂಡ್ ಫಿಲ್ಲಿಂಗ್ ಮಾದರಿಯಲ್ಲಿ ನೆಲದಲ್ಲಿ ಮುಚ್ಚಲಾಗುವುದು. ಇದರಿಂದ ಅಂತರ್ಜಲದ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎನ್ನುತ್ತಾರೆ ಅಧಿಕಾರಿಗಳು.
-----
ಇದುವರೆಗೆ ಆವರಗೊಳ್ಳದ ಘಟಕ ಕೇವಲ ಕಸ ಡಂಪಿಂಗ್‌ಗೆ ಸೀಮಿತವಾಗಿದೆ. ಸ್ವಚ್ಛ ಭಾರತ ಮಿಷನ್ ಅನುದಾನದಡಿ ಇಲ್ಲಿ ಗೊಬ್ಬರ ತಯಾರಿಕೆ ಪ್ರಕ್ರಿಯೆ ನಡೆಯುತ್ತಿದ್ದು ಟ್ರಯಲ್ ಹಂತದಲ್ಲಿದೆ. ಇದು ಆರಂಭವಾದಲ್ಲಿ ನಗರಪಾಲಿಕೆಗೆ ಆಗುವ ನಷ್ಟ ತಪ್ಪಲಿದೆ.
ರೇಣುಕಾ
ದಾವಣಗೆರೆ ನಗರಪಾಲಿಕೆ ಆಯುಕ್ತೆ.
---
ಇನ್ನು 15 ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಂದ ವಿಂಡ್ರೋ ಕಾಂಪೋಸ್ಟಿಂಗ್ ಘಟಕ ಉದ್ಘಾಟನೆ ಮಾಡಿಸುವ ಇಂಗಿತವಿದೆ. ಜನರು ಕಸ ವಿಂಗಡಣೆಗೆ ಒತ್ತು ನೀಡದಿದ್ದರೆ ಇಡೀ ವ್ಯವಸ್ಥೆಯೇ ಸಮತೋಲನ ಕಳೆದುಕೊಳ್ಳಲಿದೆ.
ಬಸವಣ್ಣ
ನಗರಪಾಲಿಕೆಯ ಪರಿಸರ ಇಂಜಿನಿಯರ್.
---
ಆವರಗೊಳ್ಳದಲ್ಲಿ ತ್ಯಾಜ್ಯರಾಶಿ ವಿಲೇಯಾಗದ್ದರಿಂದ ಸಮಸ್ಯೆಯಾಗಿತ್ತು. ದುರ್ವಾಸನೆಯ ಅಂತರ್ಜಲ, ನಾಯಿ-ನೊಣಗಳ ಹಾವಳಿ ಹಾಗೂ ಕಸಕ್ಕೆ ಹಚ್ಚಿದ್ದ ಬೆಂಕಿಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು. ಗೊಬ್ಬರ ಘಟಕವಾದಲ್ಲಿ ಕಸ ಸಕಾಲಕ್ಕೆ ಬಳಕೆಯಾಗುವುದರಿಂದ ಗ್ರಾಮಕ್ಕೆ ನೆಮ್ಮದಿ ಸಿಗಲಿದೆ. ಪರಿಸರಕ್ಕೂ ಒಳ್ಳೆಯದಾಗಲಿದೆ
ಜಿ.ಟಿ.ವೀರಣ್ಣ
ಆವರಗೊಳ್ಳ ಗ್ರಾಪಂ ಸದಸ್ಯ.
---