ಜಿಲ್ಲೆ

ಶಿಕ್ಷಣದಿಂದ ಮಾತ್ರ ಬದಲಾವಣೆ  ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆ

ಡಿ. ಎಂ. ಮಹೇಶ್

ದಾವಣಗೆರೆ: ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಶೋಷಿತರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಆಂದೋಲನ ಕೈಗೊಳ್ಳಬೇಕು ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಜಿಲ್ಲಾ ಛಲವಾದಿ ಮಹಾಸಭಾದಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುನ ಪ್ರತಿಭಾನ್ವಿತರಿಗೆ ನಗರದ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ  ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದ ಮೂಲಕ ಬದಲಾವಣೆ ತರಬಹುದು ಎಂಬುದನ್ನು ದೇಶಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಭಾರತ ಇಡೀ ಜಗತ್ತಿನ ಗಮನ ಸೆಳೆದಿದ್ದರೆ ಅದು ಶಿಕ್ಷಣದಿಂದ ಎಂದು ಅಭಿಪ್ರಾಯಪಟ್ಟರು.
ಭಾರತ ಇಂದು ವಿಶ್ವದ ಅತಿ ದೊಡ್ಡ ತಾಂತ್ರಿಕ ಮಾನವ ಶಕ್ತಿ ಉತ್ಪಾದಿಸುತ್ತಿದೆ. ದೇಶದಲ್ಲಿ ಅತಿಹೆಚ್ಚು ಇಂಜಿನಿಯರ್, ವೈದ್ಯರು, ಶಿಕ್ಷಕರು, ವಿಜ್ಞಾನಿಗಳು ಹೊರಬರುತ್ತಿದ್ದಾರೆ. ಶಿಕ್ಷಣದಿಂದ ನಮ್ಮ ಮಕ್ಕಳ ಭವಿಷ್ಯ ಆಧುನಿಕ ಜಗತ್ತಿಗೆ ಸೇರಬೇಕೇ ವಿನಹ ಪೂರ್ವಜರ ಕಷ್ಟದ ಕಾಲಕ್ಕೆ ಮರಳಬಾರದು ಎಂದರು.
ಛಲವಾದಿ ಸಮಾಜದ ವಿದ್ಯಾರ್ಥಿಗಳು ಶೇ.97ರಷ್ಟು ಅಂಕ ಪಡೆದಿರುವುದು ಹೆಮ್ಮೆಯ ವಿಚಾರ. ವರ್ಣಾಶ್ರಮ ನೆಲೆಯಲ್ಲಿ ಊರಾಚೆ ನಿಲ್ಲುತ್ತಿದ್ದ ಸಮುದಾಯ ಇಂದು ಸಮಾನತೆಯ ಮಾತುಗಳನ್ನಾಡುತ್ತಿದೆ ಎಂದರೆ ಇದಕ್ಕೆ ಅಂಬೇಡ್ಕರ್ ಕಾರಣ. ಆಧುನಿಕ ಜಗತ್ತಿನಲ್ಲಿ ನಾವು ಬದಲಾವಣೆ ಆಗದಿದ್ದರೆ ಮೊದಲಿನ ಸ್ಥಿತಿ ಮರುಕಳಿಸಲಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಪ್ರಸ್ತುತ ವೈಚಾರಿಕತೆ ಹಾಗೂ ವೈಜ್ಞಾನಿಕತೆಯಿಂದ ಕೂಡಿದ ಬದುಕನ್ನು ಕಾಣಲು ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಪ್ರತಿಭೆ ಯಾರ ಸ್ವತ್ತಲ್ಲ. ಶಿಕ್ಷಣದ ಮೂಲಕ ಸಂವಿಧಾನದ ಆಶಯ ಜಾರಿಯಾಗಬೇಕು. ಅಸಮಾನತೆ ತೊಡೆದು ಸಮಸಮಾಜ ಉದಯವಾಗಬೇಕು ಎಂದು ಆಶಿಸಿದರು.
ಶೋಷಿತ ವರ್ಗಗಳು ಒಗ್ಗಟ್ಟಿನಿಂದ ಸಂಘಟಿತ ಹೋರಾಟಗಳನ್ನು ನಿರ್ದೇಶಿಸಬೇಕು. ಎಡಗೈ, ಬಲಗೈ ಎಂಬ ಹೆಸರಿನಲ್ಲಿ ತಮ್ಮ ಕೈಗಳಿಗೆ ಏನೂ ಸಿಗದಂತೆ ಮಾಡಿಕೊಳ್ಳಬೇಡಿ. ಸಂವಿಧಾನದಲ್ಲಿ ಆ ತರಹದ ಪದ ಬಳಕೆಗೆ ಅವಕಾಶವಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳು ಎಂದೇ ಹೇಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಶೋಷಿತ ಸಮುದಾಯಗಳು ಕೇವಲ ಹಲಗೆ ಬಡಿಯುವುದರಲ್ಲೇ ಇರಬಾರದು. ಅತ್ಯಾಧುನಿಕ ಯುಗದಲ್ಲಿ ಸಾಕಷ್ಟು ನವನವೀನ ತಾಂತ್ರಿಕತೆ ಬಂದಿದೆ. ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ತಿಳಿಸಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ರುದ್ರಮುನಿ ಅಧ್ಯಕ್ಷತೆ ವಹಿಸಿದ್ದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಡಿ.ಜಿ. ಶಾಂತನಗೌಡ, ಬಿ. ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಬಸವರಾಜ್ ವಿ. ಶಿವಗಂಗಾ, ವೇಣುಗೋಪಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ವಿಜಯಕುಮಾರ್, ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಎಚ್.ಸಿ. ನಿರಂಜನಮೂರ್ತಿ, ಸೋಮಶೇಖರ್ ಬಣ್ಣದಮನೆ, ಹೊದಿಗೆರೆ ರಮೇಶ್, ಬಿ.ಎಚ್. ವೀರಭದ್ರಪ್ಪ, ಎನ್.ಜಿ. ಪುಟ್ಟಸ್ವಾಮಿ ಇತರರು ಇದ್ದರು.
----