ದಾವಣಗೆರೆ: ಕಾಂಗ್ರೆಸ್ ಶಾಸಕರಿಗೆ ಆಫರ್ ನೀಡಲಾಗಿದೆ ಎಂಬ ಆರೋಪ ಸಂಬಂಧದ ಪ್ರಕರಣವನ್ನು ಎಸ್‌ಐಟಿ, ಇಡಿ ಅಥವಾ ಸಿಬಿಐ ತನಿಖೆಗೆ ವಹಿಸಲಿ. ಆಫರ್ ನೀಡಿದವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಲಾಗಿದೆ ಎಂಬುದಾಗಿ ಶಾಸಕ ರವಿ ಗಾಣಿಗ ಮಾಡಿರುವ ಆರೋಪ ಆಧಾರರಹಿತ. ಸರ್ಕಾರದ ಮೇಲಿರುವ ಕಳಂಕ ಮರೆಮಾಚಲು ಅರಿವೆ ಹಾವು ಬಿಡುವುದನ್ನು ಕಾಂಗ್ರೆಸ್ಸಿಗರು ಕೈಬಿಡಲಿ. ಇಲ್ಲವೇ ಧರ್ಮಸ್ಥಳ, ಅಜ್ಜಯ್ಯನ ಮಠ ಅಥವಾ ಚಾಮುಂಡಿ ಸನ್ನಿಧಿಗೆ ಬಂದು ಸಾಬೀತುಪಡಿಸಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಲಾ ಒಬ್ಬರಿಗೆ 100 ಕೋಟಿ ರೂ. ಕೊಡುವುದೆಂದರೆ ಹುಡುಗಾಟಿಕೆಯಾ? ಅಥವಾ ಹಾಗೇ ಖರೀದಿ ಮಾಡಲು ನಿಮ್ಮ ಶಾಸಕರೇನು ಎಮ್ಮೆ-ಕೋಣಗಳಾ? ನಿಮ್ಮ ಶಾಸಕರ ಮೇಲೆ ನಿಮಗೆ ನಂಬಿಕೆ ಇಲ್ಲವಾದರೆ ಹೇಗೆ ಸರ್ಕಾರ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಆಡಳಿತ ಪಕ್ಷದ ಶಾಸಕರಾದ ಎಚ್.ಡಿ.ತಮ್ಮಯ್ಯ, ಬಾಬಾ ಸಾಹೇಬ್ ಪಾಟೀಲ್ ಕೂಡ ಇದನ್ನು ತಳ್ಳಿ ಹಾಕಿದ್ದಾರೆ. ರವಿಗಾಣಿಗ ಮಾಡಿದ ಆರೋಪ ಸಾಬೀತುಪಡಿಸದಿದ್ದರೆ ಮಾನನಷ್ಟ ಹೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಳಿಗೆ ಹಣ ಹೊಂದಾಣಿಕೆ ಮಾಡಲು ಅಸಮರ್ಥವಾಗಿರುವ ರಾಜ್ಯ ಸರ್ಕಾರ, ಇದೀಗ 14 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಹೊರಟಿದೆ. ಸರ್ಕಾರ ಇದನ್ನು ಕೈಬಿಡದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ, ಕ್ಷೇತ್ರದಲ್ಲಿ ಓಡಾಡಲು ಆಗುತ್ತಿಲ್ಲ ಎಂದು ನಿಮ್ಮ ಶಾಸಕರೇ ಹೇಳುತ್ತಿದ್ದಾರೆ. ಅನರ್ಹ ಬಿಪಿಎಲ್ ಪಡಿತರದಾರರನ್ನು ತೆಗೆದುಹಾಕುವುದೇ ಆಗಿದ್ದರೆ ಹಿಂದೆ ನೀವು ಸಿಎಂ ಆಗಿದ್ದಾಗ, ವಿಪಕ್ಷನಾಯಕರಾಗಿದ್ದಾಗ ನಿಮ್ಮ ಧ್ವನಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜು ವೀರಣ್ಣ, ಪ್ರವೀಣ್ ಜಾಧವ್, ಮಂಜು ಪಂಜು ಇತರರು ಇದ್ದರು.
----