ದಾವಣಗೆರೆ: ಕಾಂಗ್ರೆಸ್-ಬಿಜೆಪಿ ಇಬ್ಬರ ಜಗಳದಲ್ಲಿ ಲಾಭ ಪಡೆಯಲು ಬಂದಿಲ್ಲ. ನನ್ನದೇ ಆದ ತತ್ವ-ಸಿದ್ಧಾಂತ, ವ್ಯಕ್ತಿತ್ವವಿದೆ. ದಾವಣಗೆರೆ ಜಿಲ್ಲೆ ಅಭಿವೃದ್ಧಿಯಲ್ಲಿ ದಾಪುಗಾಲು ಇಡಬೇಕು. ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೇ ನನ್ನ ಗುರಿ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್‌ಕುಮಾರ್ ಹೇಳಿದರು.
ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಐಟಿ-ಬಿಟಿ, ಫುಡ್ ಪ್ರೊಸೆಸಿಂಗ್ ಘಟಕಗಳು, ಆಗ್ರೋ ಇಂಡಸ್ಟ್ರೀಸ್, ವಿವಿಧ ಬೆಳೆಗಳ ಸಂಶೋಧನಾ ಕೇಂದ್ರಗಳು, ಚಾಕೊಲೇಟ್, ಪೇಂಟಿಂಗ್, ಅಡಕೆ ಸಂಬಂಧಿತ ಕೈಗಾರಿಕೆಗಳು, ಅಡಕೆ ಬೈ ಪ್ರೊಡಕ್ಟ್ಸ್, ದ್ರಾವಿಡ್, ಪ್ರಕಾಶ್ ಪಡುಕೋಣೆ ಅಕಾಡೆಮಿ ಮಾದರಿಯಲ್ಲಿ ಸಂಸ್ಥೆ ಸ್ಥಾಪಿಸುವ ಇರಾದೆ ಇದೆ ಎಂದು ತಿಳಿಸಿದರು.
ಪದವೀಧರರು ಬೆಂಗಳೂರು ಇನ್ನಿತರೆಡೆ ಉದ್ಯೋಗ ಅರಸಿ ಹೋಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಿ ಕೈಗಾರಿಕೆಗಳನ್ನು ದಾವಣಗೆರೆಗೆ ತರಬೇಕಿದೆ. ಜವಳಿ ಪಾರ್ಕ್, ಟೆಕ್ಸ್‌ಟೈಲ್ಸ್ ಉದ್ಯಮಕ್ಕೆ ಉತ್ತೇಜನಕ್ಕೆ ಆದ್ಯತೆ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ನ್ಯಾಷನಲ್ ಇನ್‌ಸ್ಟೆಂಟ್ ಡಿಸೈನ್ ಸಂಸ್ಥೆ, ಏತ ನೀರಾವರಿ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತವಾಗಬೇಕು. ಇದಕ್ಕಾಗಿ ನನ್ನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಶೀಥಲೀಕರಣ ಘಟಕ, ತಾಲೂಕುವಾರು ಸಾಯಿಲ್ ರಿಸರ್ಚ್ ಸೆಂಟರ್, ಕೋಚಿಂಗ್ ಸೆಂಟರ್, ನವೋದಯ ಮಾದರಿಯಲ್ಲಿ ಹಳ್ಳಿ ಶಾಲೆಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ಹೈಟೆಕ್ ಶಾಲೆಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಜನರೇ ನನ್ನ ಹೈಕಮಾಂಡ್. ಇಷ್ಟು ವರ್ಷ ಅಧಿಕಾರ ಅನುಭವಿಸಿದವರ ಮನೆ ಬಾಗಿಲನ್ನು ನೀವು ಕಾಯಬೇಕು. ಸಾಮಾನ್ಯ ಜನರಿಗೂ ಅಧಿಕಾರ ಸಿಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಚನ್ನಯ್ಯ ಒಡೆಯರ್ ಅವರಿಗೆ ಆದಂತೆ ನನಗೂ ಟಿಕೆಟ್ ನೀಡುವಲ್ಲಿ ಮೋಸವಾಗಿದೆ. ಸ್ವಾಭಿಮಾನಿಗಳ ಪ್ರತಿನಿಧಿಯಾಗಿ ಕಣಕ್ಕಿಳಿದಿದ್ದೇನೆ. ಕ್ರಮ ಸಂಖ್ಯೆ 28ರ ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಮತ ನೀಡಿ ಎಂದು ಮನವಿ ಮಾಡಿದರು.
ದೊಡ್ಡ ಬೂದಿಹಾಳ್ ಗ್ರಾಮದಲ್ಲಿ ಮಾತನಾಡಿ, ಇನ್‌ಸೈಟ್ಸ್ ಸಂಸ್ಥೆಯನ್ನು ಕಷ್ಟಪಟ್ಟು ಬೆಳೆಸಿದ್ದೇನೆ. ದಾವಣಗೆರೆ ರಾಜಕಾರಣದಲ್ಲಿ ಹೊಸ ಚಳವಳಿ ಆರಂಭಿಸಬೇಕು. ಬದಲಾವಣೆಗಾಗಿ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ತಾಲೂಕಿನ ದೊಗ್ಗಳ್ಳಿ, ದೊಡ್ಡ ಬೂದಿಹಾಳ್, ಅರಸಾಪುರ, ಕೋಡಿಹಳ್ಳಿ, ಚಿಕ್ಕಬೂದಿಹಾಳು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು. ಕೋಡಿಹಳ್ಳಿ ಗ್ರಾಮದ ಆನಂದ, ಕುಮಾರ, ದುರುಗೇಶ, ಹರೀಶ, ಮಧು, ಪ್ರದೀಪ, ಚಿಕ್ಕಬೂದಿಹಾಳು ಗ್ರಾಮದ ಹನುಮಂತಪ್ಪ, ರುದ್ರಪ್ಪ, ಪ್ರಕಾಶ್, ಸಣ್ಣ ರುದ್ರಪ್ಪ, ಪ್ರಕಾಶ, ಅನಂತ, ಮಹೇಶ, ಗಿರೀಶ, ಬಸವರಾಜ್, ಅಣ್ಣಪ್ಪ, ದೊಡ್ಡಬೂದಿಹಾಳ್ ಗ್ರಾಮದ ಸಿದ್ಧಪ್ಪ, ಮುರುಗೇಶ್, ಚಂದ್ರಪ್ಪ, ಈಶಣ್ಣ, ಗೌಡ್ರು ಸಿದ್ಧಬಸಪ್ಪ, ಕುಮಾರ್, ಪ್ರವೀಣ್ ಕುಮಾರ್, ಸೋಮಣ್ಣರ ಬಸಣ್ಣ, ಗಿರೀಶ್, ಹನುಮಂತಣ್ಣ ಇತರರಿದ್ದರು.