ಜಿಲ್ಲೆ

ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು  ಸಚಿವ ಮಲ್ಲಿಕಾರ್ಜುನ್ ಹೇಳಿಕೆ

ಡಿ. ಎಂ. ಮಹೇಶ್

ದಾವಣಗೆರೆ: ಸರ್ಕಾರದಿಂದ ಹೆಚ್ಚು ಅನುದಾನ ತರುವ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಲಾಗುವುದು. ರಸ್ತೆ, ನೀರಾವರಿ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದಲ್ಲಿ ಭಾನುವಾರ, ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಾಹನಗಳ ಕಾರ್ಯಾಚರಣೆ ಹಾಗೂ ನೂತನ ಬಸ್ ಮಾರ್ಗಗಳಿಗೆ ಚಾಲನೆ ನೀಡಿ ಮಾತನಾಡಿದರು.
ಒಂದೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಬಡಜನರ ಅಭಿವೃದ್ಧಿಗೆ ಅನೇಕ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಜನಜೀವನಕ್ಕೆ ಬೇಕಾದ ಅನ್ನ, ವಸತಿ, ಶಿಕ್ಷಣ ಹಾಗೂ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮನಸ್ಸು ಒಪ್ಪುವಂತಹ ಕೆಲಸ ನಡೆದಿಲ್ಲ. ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನುಮುಂದೆ ಹೆಚ್ಚು ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಬೇಕಿದೆ. ಹಳ್ಳಿಗಳಲ್ಲಿ ರಸ್ತೆಗಳು ಹೆಚ್ಚಿನ ಅಭಿವೃದ್ಧಿ ಆಗಬೇಕಿದ್ದು, ಸುಂದರ ನಗರ ನಿರ್ಮಾಣವಾಗಬೇಕು. ಇದಕ್ಕಾಗಿ ಎಲ್ಲರ ಸಹಕಾರ ಮುಖ್ಯ ಎಂದರು.
ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳುವ ಜತೆಗೆ ಸ್ವಚ್ಛತೆ ಕಾಪಾಡಬೇಕು ಹಾಗೂ ಅಧಿಕಾರಿಗಳು ಜನಸ್ನೇಹಿಯಾಗಿ ಸೇವೆ ಒದಗಿಸಬೇಕು ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಂದ ಅನುದಾನ ತರಬೇಕು ಹಾಗೂ ಹೇಗೆ ಬಳಕೆ ಮಾಡಬೇಕು ಎಂಬುದು ಬಿಜೆಪಿಯವರಿಗೆ ಗೊತ್ತಿಲ್ಲ. ಸ್ಮಾರ್ಟ್‌ಸಿಟಿ ಹಣ ಬೇರೆಕಡೆ ವಿನಿಯೋಗಿಸಿ, ಕೆಎಸ್‌ಆರ್‌ಟಿಸಿಯಿಂದಲೇ ಹೆಚ್ಚು ಅನುದಾನ ತಂದು ನಿಲ್ದಾಣ ನಿರ್ಮಿಸಬಹುದಿತ್ತು  ಎಂದು ಸಚಿವರು ಅಭಿಪ್ರಾಯಪಟ್ಟರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಕೆಎಸ್‌ಆರ್‌ಟಿಸಿ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಿ ಹೊಸದನ್ನು ನಿರ್ಮಿಸಲು ಮನವಿ ಸಲ್ಲಿಸಿದ್ದೆವು. ಇದಕ್ಕೆ ಒಪ್ಪಿಕೊಂಡ ಸಾರಿಗೆ ಸಚಿವರು ಸರ್ಕಾರದಿಂದ ಶೇ.50 ರಷ್ಟು ಹಣ ನೀಡಲು ಒಪ್ಪಿಕೊಂಡಿದ್ದರು. ಅಷ್ಟರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಅವರ ಅವಧಿಯಲ್ಲಿ ಶೇ.50 ರಷ್ಟು ಹಣ ಕೂಡ ನೀಡಲಿಲ್ಲ ಎಂದರು.
ಮೇಲಿನಿಂದಲೇ ಟೆಂಡರ್ ಕಾರ್ಯ ನಡೆದಿರುವುದರಿಂದ ಕಾಮಗಾರಿಯಲ್ಲಿ ಗುಣಮಟ್ಟವಿದೆ. ಆದರೆ ನಮ್ಮ ಯೋಜನೆ ಪ್ರಕಾರ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಡೆದಿಲ್ಲ. ಅದನ್ನು ಸ್ವಲ್ಪ ಬದಲಾಯಿಸಬೇಕಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹಾಗೂ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಶಾಸಕ ಪಂಪಾಪತಿ ಪ್ರಮುಖ ಕಾರಣಕರ್ತರು. ಇದಕ್ಕಾಗಿ ಆಮರಣಾಂತ ನಿರಶನ ನಡೆಸಿದ್ದರು. ನೂತನ ಬಸ್ ನಿಲ್ದಾಣಕ್ಕೆ ಅವರ ಹೆಸರಿಡುವಂತೆ ಮನವಿಗಳು ಸಲ್ಲಿಕೆಯಾಗಿದ್ದು, ಈ ಬಗ್ಗೆ ಪಾಲಿಕೆ ಮೇಯರ್ ಹಾಗೂ ಎಲ್ಲ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಶೀಘ್ರ ನಿರ್ಣಯ ಕೈಗೊಳ್ಳಲಿ ಎಂದು ತಿಳಿಸಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್, ಯಾಂತ್ರಿಕ ಇಂಜಿನಿಯರ್ ಕೆ. ವೆಂಕಟೇಶ್, ಸಂಚನಾಧಿಕಾರಿ ಫಕೃದ್ದೀನ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್‌ಕುಮಾರ್ ಇತರರು ಇದ್ದರು.