ದಾವಣಗೆರೆ: ಮುಂದಿನ ಹತ್ತು ವರ್ಷಗಳಲ್ಲಿ ದಾವಣಗೆರೆ ನಗರ, ದೇಶದಲ್ಲಿ ಐಎಎಸ್ ಹಬ್ ಆಗಿ ನಿರ್ಮಾಣವಾಗಲಿದೆ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಹೇಳಿದರು.
ನಗರದ ನಿಜಲಿಂಗಪ್ಪ ಬಡಾವಣೆಯ ಎಜು ಏಷ್ಯಾ ಶಾಲೆ ಎದುರಿನ ಜಾಧವ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ದಾವಣಗೆರೆ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎಂದು ಹೆಸರಾಗಿದ್ದ ದಾವಣಗೆರೆಯನ್ನು ಮುಂಬರುವ ವರ್ಷಗಳಲ್ಲಿ ಐಎಎಸ್ ಹಬ್ ಮಾಡುವ ಗುರಿಯಿದೆ ಎಂದು ತಿಳಿಸಿದರು.
40 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಕರ್ನಾಟಕ ಐಎಎಸ್ ಹಬ್ ಆಗಿ ರೂಪುಗೊಳ್ಳುವಂತೆ ಮಾಡಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ ಎಂದರು.
ಅಹಿಂದ ವರ್ಗ ಸೇರಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ರಿಯಾಯಿತಿ ದರದಲ್ಲಿ ಐಎಎಸ್, ಕೆಎಎಸ್ ತರಬೇತಿ ನೀಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ವಿದ್ಯಾರ್ಥಿಗಳಂತೆ ಒಟ್ಟು ಜಿಲ್ಲೆಯ 80 ವಿದ್ಯಾರ್ಥಿಗಳಿಗೆ ಬರುವ ಜನವರಿಯಿಂದ ಉಚಿತ ತರಬೇತಿ ನೀಡುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.
ಜಮ್ಮು ಕಾಶ್ಮೀರ, ಬೆಂಗಳೂರು ಸೇರಿ ಹಲವೆಡೆ ಸಂಸ್ಥೆಯ ಶಾಖೆಗಳಿದ್ದು, ದೇಶದಲ್ಲಿಯೇ ಮೂರನೆಯ ಅತ್ಯುತ್ತಮ ತರಬೇತಿಗೆ ಹೆಸರಾಗಿದೆ. ಉತ್ತಮ ತರಬೇತಿ ಕಾರಣಕ್ಕೆ ಅನ್ಯ ರಾಜ್ಯಗಳ ವಿದ್ಯಾರ್ಥಿಗಳು ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಶಾಖೆಯಲ್ಲಿ ಯುಪಿಎಸ್‌ಸಿ, ಕೆಎಎಸ್‌ನ ಗುಣಮಟ್ಟದ ತರಬೇತಿಯನ್ನು ಬೆಂಗಳೂರಿನ ಸಿಬ್ಬಂದಿಯೇ ಇಲ್ಲಿಗೆ ಬಂದು ನೀಡಲಿದೆ. ಮೂರ್ನಾಲ್ಕು ವರ್ಷಗಳಲ್ಲಿ ಯಾರೇ ಬಂದು ಸೇರಿದರೂ ಸರ್ಕಾರಿ ಉದ್ಯೋಗ ಒದಗಿಸುವ ಪ್ರಯತ್ನ ಮಾಡಲಿದ್ದೇವೆ ಎಂದರು.
ನಿವೃತ್ತ ಪ್ರಾಚಾರ್ಯ ಯಲ್ಲಪ್ಪ ಕಕ್ಕರಗೊಳ್ಳ ಮಾತನಾಡಿ, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ ವಿನಯ್ಕುಮಾರ್ ಕೊಟ್ಟ ಮಾತಿನಂತೆ ಇಲ್ಲಿ ತರಬೇತಿ ಸಂಸ್ಥೆ ಆರಂಭಿಸಿರುವುದು ಮೆಚ್ಚುಗೆಯ ವಿಷಯ. ಆಡಳಿತಾತ್ಮಕ ಸೇವೆಗೆ ಹೋಗುವ ಪಾಲಕರ ಹಾಗೂ ವಿದ್ಯಾರ್ಥಿಗಳ ಕನಸು ಸಾಕಾರಗೊಳ್ಳಲಿ ಎಂದು ಆಶಿಸಿದರು.
ಉಪನ್ಯಾಸಕ ಮಳಲ್ಕ್ಕೆೆರೆ ಓಬಳೇಶ್, ಷಣ್ಮುಖಪ್ಪ, ಇನ್‌ಸೈಟ್ಸ್ ಸಂಸ್ಥೆಯ ಎಂ. ಡಿ. ಶರತ್, ಕರಿಬಸವಯ್ಯ ಒಡೆಯರ್, ಸಿದ್ದಯ್ಯ ಒಡೆಯರ್, ಶಿವಮೂರ್ತಿ, ಮನು ಇತರರು ಇದ್ದರು. ಪುರಂದರ ಲೋಕಿಕೆರೆ ಸ್ವಾಗತಿಸಿದರು.
----