ದಾವಣಗೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಜೂ.3 ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಾವಣಗೆರೆ, ಹರಿಹರ, ಜಗಳೂರು ತಾಲೂಕು ಒಳಗೊಳ್ಳುವ
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 7 ಮತಗಟ್ಟೆಗಳಿದ್ದು 4351 ಮತದಾರರಿದ್ದಾರೆ. ಹರಿಹರ ಗಾಂಧಿ ಮೈದಾನದ ಸರ್ಕಾರಿ ಪ್ರೌಢಶಾಲೆ, ದಾವಣಗೆರೆ ಬಾಲಕರ ಸರ್ಕಾರಿ .ಪೂ ಕಾಲೇಜಿನ ಕೊಠಡಿ 1ರಿಂದ 5 ಕೊಠಡಿಗಳು, ಜಗಳೂರು ತಾಲೂಕು ಕಚೇರಿಯಲ್ಲಿ ಬೂತ್ ಸ್ಥಾಪಿಸಲಾಗಿದೆ. ಮತದಾರರಿಗೆ ಬಲಗೈ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ.
ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕು ವ್ಯಾಪ್ತಿಯ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 4 ಮತಗಟ್ಟೆಗಳಿದ್ದು 968 ಮತದಾರರಿದ್ದಾರೆ. ನ್ಯಾಮತಿ ತಾಲೂಕು ಕಚೇರಿ ಕೊಠಡಿ 1, ಹೊನ್ನಾಳಿ ಸಾಮರ್ಥ್ಯ ಸೌಧ, ಬಸವಾಪಟ್ಟಣ ಜನತಾ ಪೌಢಶಾಲೆ ಕೊಠಡಿ 3, ಚನ್ನಗಿರಿ ತಾಪಂ ಕಟ್ಟಡ ಪೂರ್ವ ಭಾಗ ಕೊಠಡಿ 3. ಇಲ್ಲಿನ ಮತದಾರರಿಗೆ ಬಲಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ.
ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕು ಒಳಗೊಂಡ ನೈಋತ್ಯ ಪದವೀಧರರ ಕ್ಷೇತ್ರದಲ್ಲಿ 8 ಮತಗಟ್ಟೆಗಳಿದ್ದು, 6558 ಮತದಾರರಿದ್ದಾರೆ.
ನ್ಯಾಮತಿ ತಾಲ್ಲೂಕು ಕಚೇರಿ, ಹೊನ್ನಾಳಿ ತಾಲ್ಲೂಕು ಆಡಳಿತ ಸೌಧ ಕೊಠಡಿ 1, ಕೊಠಡಿ 2, ಕೊಠಡಿ 3, ಬಸವಾಪಟ್ಟಣ ಜನತಾ ಪ್ರೌಢಶಾಲೆ ಪೂರ್ವ ವಿಭಾಗ ಕೊಠಡಿ 1, ಕೊಠಡಿ 2, ಚನ್ನಗಿರಿ ತಾಪಂ ಕಟ್ಟಡ ಪೂರ್ವ ವಿಭಾಗ ಕೊಠಡಿ 1, ಕೊಠಡಿ 2. ಇಲ್ಲಿನ ಮತದಾರರಿಗೆ ಬಲಗೈ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ ಎಂದು ತಿಳಿಸಿದರು.