ಜಿಲ್ಲೆ

ಶಾಲೆಗಳಲ್ಲಿ ನೈತಿಕ ಶಿಕ್ಷಣ ಅತ್ಯಗತ್ಯ ಸಂತೋಷ್ ಹೆಗಡೆ ಆಶಯ

ಡಿ. ಎಂ. ಮಹೇಶ್

ದಾವಣಗೆರೆ: ಇಂದು ದುರಾಸೆ ಇಲ್ಲದ ಕಚೇರಿಗಳೇ ಇಲ್ಲವಾಗಿವೆ. ಹೀಗಾಗಿ ಉತ್ತಮ ಸಮಾಜಕ್ಕಾಗಿ ಶಾಲೆಗಳಲ್ಲಿ ಇತರೆ ಪಠ್ಯಗಳ ಜತೆಗೆ ನೈತಿಕ ಶಿಕ್ಷಣ ಬೋಧಿಸುವ ಅಗತ್ಯವಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಶಯ ವ್ಯಕ್ತಪಡಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ, ರೈತ ಮುಖಂಡ ತೇಜಸ್ವಿ ವಿ.ಪಟೇಲ್ ಅವರ 25 ವರ್ಷಗಳ ಸಾರ್ವಜನಿಕ ಕ್ಷೇತ್ರದಲ್ಲಿ ಭಾಗವಹಿಸುವಿಕೆ ಕುರಿತಾದ ‘ಹಸಿರು ಹಾದಿಯ ಹೆಜ್ಜೆಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದೆಲ್ಲ ತಪ್ಪು ಮಾಡಿದರೆ ಪಾಲಕರು ಏಟು ಕೊಡುತ್ತಿದ್ದರು. ಬುದ್ದಿವಾದ ಹೇಳುತ್ತಿದ್ದರು. ಆದರೆ ಇಂದು ಮಕ್ಕಳ ಕೈಗೆ ಐಫೋನ್ ನೀಡಿ ಪಾಲಕರು ಟಿವಿ ನೋಡುವವರಿದ್ದಾರೆ. ಕೇವಲ ಆದಾಯ ಗಳಿಕೆಗೆ ಗಮನ ನೀಡದೆ ಮಕ್ಕಳ ಬೆಳವಣಿಗೆಯಲ್ಲೂ ಪಾಲುದಾರರಾಗಬೇಕು ಎಂದೂ ಆಶಿಸಿದರು.

ದೇಶದಲ್ಲಿ ಅಭಿವೃದ್ಧಿ ಹೆಸರಲ್ಲಿ ದೊಡ್ಡ ಮೊತ್ತದ ಹಗರಣಗಳೇ ನಡೆದಿವೆ. ಸೋರಿಕೆಯಾದ ಹಣ ಲೆಕ್ಕ್ಕ ಹಾಕಿದರೆ ಇದರಲ್ಲಿ ಅದೆಷ್ಟು ಅಭಿವೃದ್ಧಿ ಕಾಣಬಹುದಿತ್ತು. ದುರಾಸೆ ಎಂಬ ರೋಗ ನಿಂತಿಲ್ಲ. ಇದರ ಕಡಿವಾಣಕ್ಕೆ ಕಾನೂನಿಲ್ಲ. ತಪ್ಪಿತಸ್ಥರ ವಿರುದ್ಧ ಕೋರ್ಟ್ ತೀರ್ಪು ಬರಲು 40-50 ವರ್ಷ ಆಗುವಾಗ ಯಾರಲೂ ಹದರಿಕೆ ಇಲ್ಲವಾಗಿದೆ ಎಂದು ಹೇಳಿದರು.

ಹಿರಿಯರು ನೀಡಿದ ತೃಪ್ತಿ, ಮಾನವೀಯತೆ ಎರಡು ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿದಲ್ಲಿ ಸಮಾಜ ಬದಲಾವಣೆ ಮಾಡಬಹುದು. ನನ್ನೊಬ್ಬನಿಂದಲೇ ಅಸಾಧ್ಯ ಎಂಬ ಮನೋಭಾವ ಬೇಡ. ಬದುಕಿನಲ್ಲಿ ಈ ಮೌಲ್ಯಗಳು ಬರದಿದ್ದಲ್ಲಿ ಅಕ್ಕ-ಪಕ್ಕದ ದೇಶಗಳ ಸ್ಥಿತಿಗೆ ನಾವು ತಲುಪಬೇಕಾದೀತು ಎಂದು ತಿಳಿಸಿದರು.

ಶ್ರೀಮಂತರಾಗಲು ಇಂದು ಪೈಪೋಟಿ ನಡೆಯುತ್ತಿದೆ. ನ್ಯಾಯಯುತ ದಾರಿಯಲ್ಲಿ ಶ್ರೀಮಂತರಾದಲ್ಲಿ, ಅಧಿಕಾರ ಪಡೆದರೆ ತಪ್ಪಲ್ಲ ಎಂದ ಅವರು ರೈತರ ಬಗ್ಗೆ ಕಾಳಜಿ ತೋರುವವರ ಸಂಖ್ಯೆ ಕಡಿಮೆ. ತೇಜಸ್ವಿ ಪಟೇಲ್ ಅವರು ರೈತರಿಗಾಗಿ ಮಾಡಿದ ಕೆಲಸಗಳು ಅಭಿನಂದನಾರ್ಹ ಎಂದು ಹೇಳಿದರು.

ಮಾಜಿ ಶಾಸಕ ಮಹಿಮ ಜೆ. ಪಟೇಲ್ ಮಾತನಾಡಿ ಸ್ಥಾನಮಾನ ಇದ್ದಲ್ಲಿ ಪವರ್ ಬರುವುದಿಲ್ಲ. ತೇಜಸ್ವಿ ಪಟೇಲರು ಸ್ಥಾನಮಾನಕ್ಕಾಗಿ ಬೆನ್ನು ಹತ್ತಿದವರಲ್ಲ. ಯಾವುದೇ ಅಧಿಕಾರಿ, ರಾಜಕಾರಣಿಗಳು ಗುರುತು ಹಿರಿಯುವಷ್ಟು ಶಕ್ತಿ ಅವರಲ್ಲಿದೆ ಎಂದರಲ್ಲದೆ, ಸಂಸಾರ, ಜಾತಿ ಮೊದಲಾದ ಬಂಧನಗಳಿಂದ ಮುಕ್ತರಾಗಲು ನಾವು ಅಂತರಂಗದಲ್ಲಿ ಎರಡನೇ ಸ್ವಾತಂತ್ರೃ ಚಳವಳಿ ಮಾಡಬೇಕಿದೆ ಎಂದು ತಿಳಿಸಿದರು.

ಮುಖಂಡ ತೇಜಸ್ವಿ ವಿ. ಪಟೇಲ್ ಮಾತನಾಡಿ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ ಎನ್ನುವುದೇ ದೊಡ್ಡ ಶತ್ರುವಾಗಿದೆ. ಇದು ಅಕ್ರಮ ಮಾಡಲು ಪರವಾನಿಗೆ ನೀಡಿದಂತೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರಕ್ಕಾಗಿ ಕೃಷಿ ಭೂಮಿ ಒಕ್ಕಲೆಬ್ಬಿಸುವುದರ ವಿರುದ್ಧ, ಕೆಎಐಡಿಬಿಯಲ್ಲಿ 145 ಎಕರೆ ಭೂ ಸ್ವಾಧೀನ ಸಂಬಂಧ ಪರಿಹಾರಕ್ಕಾಗಿ ನಡೆಸಿದ ಪ್ರತಿಭಟನೆ ಹಾಗೂ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಮುರ ಆರಂಭಕ್ಕಾಗಿ ಪಾದಯಾತ್ರೆ ಮೊದಲಾದ ಹೋರಾಟಗಳು ಕೃತಿಯಲ್ಲಿ ದಾಖಲಾಗಿವೆ ಎಂದರು.

ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಎಂ. ಮೈತ್ರಿ ಮಾತನಾಡಿ ಲೋಹಿಯಾ, ಜಾರ್ಜ್ ಫರ್ನಾಂಡೀಸ್ ಮೊದಲಾದವವರ ಪ್ರಭಾವದಿಂದಾಗಿ ಜೆ.ಎಚ್.ಪಟೇಲರ ಕುಟುಂಬ ಸದಸ್ಯರಲ್ಲಿ ಸಮಾಜವಾದಿ ಚಿಂತನೆಗಳು ಪ್ರತಿಬಿಂಬಿತವಾಗಿವೆ ಎಂದರು.

ಸುಳಯ್ ಎಂದರೆ ಪವಿತ್ರ ನೀರು ಎಂಬ ಅರ್ಥವಿದೆ. ಹೀಗಾಗಿ ಸೂಳೆಕೆರೆ ಎಂಬ ಹೆಸರು ಬಂದಿದೆ ಎಂದು ವಿಶ್ಲೇಷಿಸಿದ ಅವರು, ಸಾಮೂಹಿಕ ಬೇಸಾಯದ ಮೂಲಕ ಸಹಕಾರಿ ಕೃಷಿ ನೀತಿ ತರಬೇಕಿದೆ. ಅಭ್ಯರ್ಥಿಗಳು ಆನ್‌ಲೈನ್ ಹೊರತಾಗಿ ಬಹಿರಂಗ ಪ್ರಚಾರ ಮಾಡದಂತೆ ಚುನಾವಣಾ ನೀತಿ ಬದಲಾಗಬೇಕಿದೆ ಎಂದೂ ಆಶಿಸಿದರು.

ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ. ಅಣ್ಣಯ್ಯ ಮಾತನಾಡಿ ತೇಜಸ್ವಿ ಪಟೇಲರು ಸಂತರಾದರೆ ಮುಂದಿನ ಜನಾಂಗಕ್ಕೆ ಮಾರ್ಗದರ್ಶನದ ಕೊರತೆ ಕಾಡಬಹುದು. ಜನಸೇವೆ ಮಾಡುವ ಇಂಥವರನ್ನು ಉಳಿಸಿಕೊಂಡು ಹೋಗುವ ಸಮಾಜದ ಮೇಲಿದೆ ಎಂದರು.

ಪುಸ್ತಕದ ಸಂಪಾದಕ ಪಾಪುಗುರು ಪ್ರಾಸ್ತಾವಿಕ ಮಾತನಾಡಿದರು. ಲತಾ ತೇಜಸ್ವಿ ಪಟೇಲ್, ಮಾಜಿ ಶಾಸಕ ಕೆ. ಶಿವಮೂರ್ತಿನಾಯ್ಕ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಚಾಮರಾಜನಗರದ ರೈತ ಮುಖಂಡ ಭಾಗ್ಯರಾಜ್ ಇದ್ದರು.