ದಾವಣಗೆರೆ: ಶಿಷ್ಟ ಮತ್ತು ಜಾನಪದ ಸಾಹಿತ್ಯ ಎರಡರಲ್ಲೂ ಒಳಿತು, ಕೆಡುಕುಗಳಿವೆ. ಜವಾಬ್ದಾರಿ ಸ್ಥಾನದಲ್ಲಿರುವ ಪ್ರಾಧ್ಯಾಪಕರು ಇವನ್ನು ಪರಾಮರ್ಶಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕಿದೆ ಎಂದು ಹಿರಿಯ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ, ಪ್ರಾಚಾರ್ಯ ಎಂ.ಮಂಜಣ್ಣ ಅವರ ಸಿರಿಯಜ್ಜಿ ಸಂಕಥನ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯವಾದರೆ ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯವಾಗಿದ್ದು ಇದು ಕೂಡ ಮುಖ್ಯ. ದೇಶದ ಉತ್ತಮ ವಿಚಾರಗಳ ಪಳಯುಳಿಕೆಗಳು ಅಮೆರಿಕಾ, ಇಂಗ್ಲೆಂಡ್‌ನಲ್ಲಿ ಉಳಿದಿವೆ. ಹೀಗಾಗಿ ಪ್ರಾಧ್ಯಾಪಕರು ಮಕ್ಕಳಿಗೆ ನಿಜವಾದ ಆಸ್ತಿ ಯಾವುದು ಎಂಬುದರನ್ನು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಅಕ್ಷರ ಬಾರದವರು ಅನಕ್ಷರಸ್ಥರು ಎಂದೂ, ಜಾನಪದ ಎಂದರೆ ಮೌಢ್ಯ ಎಂದು ಜರಿಯುವುದು ಸರಿಯಲ್ಲ. ಅಕ್ಷರ ಬಾರದವರಲ್ಲೂ ಸಿರಿಯಜ್ಜಿಯಂತಹ ಅಸಂಖ್ಯಾತ ವಿದ್ವಾಂಸರು ಇದ್ದಾರೆ ಎಂಬುದನ್ನು ಮರೆಯಬಾರದು ಎಂದರು.
ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸೆ. ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದ ಸಿರಿಯಜ್ಜಿ, ಹತ್ತ್ತು ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ ಎಂದು ಹೇಳುವುದರ ಹಿಂದೆ ದೊಡ್ಡ ಸಂದೇಶವಿದೆ. ಅವಳ ಹಾಡುಗಾರಿಕೆ ಕ್ರಮ ವಿಸ್ಮಯಕಾರಿಯಾಗಿದ್ದರೆ ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. ಜನಪದರು ನೈಜ ಇತಿಹಾಸವನ್ನು ಸೂಕ್ಷ್ಮ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ವಿವರಿಸಿದರು.
ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನು ಸಿರಿಯಜ್ಜಿ ವಿರೋಧಿಸಿದ್ದರು. 100ಕ್ಕೂ ಹೆಚ್ಚು ತ್ರಿಪದಿಗಳನ್ನು ಹಾಡಿದ್ದಾರೆ. ಮಳೆರಾಯ ಹಾಗೂ ಮದುವೆ ಸಂಭ್ರಮದ ತ್ರಿಪದಿ ಅವರಲ್ಲಿದ್ದವು. ಅವರ ಕುರಿತಂತೆ ಹಂಪಿ ವಿವಿಯು ಸಾವಿರದ ಸಿರಿ ಬೆಳಕು ಕೃತಿ ಹೊರತಂದಿದೆ. ಅವರ ಅಪ್ರಕಟಿತ ಗೀತೆಗಳು ಸಾಕಷ್ಟಿವೆ ಎಂದು ಹೇಳಿದರು.
ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಪುಸ್ತಕ ಕುರಿತು ಮಾತನಾಡಿದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಎಂ.ಮುತ್ತಯ್ಯ, ಸಿರಿಯಜ್ಜಿ ಸೃಷ್ಟಿಸಿದ್ದು ಬರಿಯ ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದಿದೆ. ಇದು ಕಾಡುಗೊಲ್ಲರು ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆಯೂ ಆಗಿದೆ ಎಂದರು.
ಹಿಂದುಳಿದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಸಣ್ಣ ಪುಟ್ಟ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರು ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ ಎಂದು ಹೇಳಿದರು.
ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಕಾಲದಲ್ಲಿ ಮಾನ್ಯತೆ ದಕ್ಕಿತು. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಅವರಿಬ್ಬರೂ ಸಾಕಷ್ಟು ಶ್ರಮಿಸಬೇಕಾಯಿತು ಎಂದು ತಿಳಿಸಿದರು.
ಸಿರಿಯಜ್ಜಿ ಸಂಕಥನ ಕೃತಿಯನ್ನು ಜಾನಪದ ಅಧ್ಯಯನದಲ್ಲಿ ವಿಸ್ತರಣೆ ಕಂಡ, ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತ್ತುವಾಗಿ ಸಿರಿಯಜ್ಜಿಯನ್ನು ಪರಿಗಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ ಎಂದು ಹೇಳಿದರು.
ಸಿರಿಯಜ್ಜಿ ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಪ್ರತಿ ಪದದ ವಿವರಗಳನ್ನು ಅವರು ನೀಡಿದ್ದಾರೆ. ಕಾವ್ಯ ಅವರ ಬದುಕಿನ ಭಾಗವಾಗಿದ್ದಿಂದಲೇ ನಿರರ್ಗಳವಾಗಿ ಹಾಡುತ್ತಿದ್ದರು ಎಂದು ಸ್ಮರಿಸಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ನಾಡೋಜ ಜಿ. ರಾಜಶೇಖರಯ್ಯ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.
ನಾಡೋಜ ಸಿರಿಯಜ್ಜಿ ಪ್ರತಿಷ್ಠಾನ-ಬೆಂಗಳೂರು, ದಾವಣಗೆರೆಯ ಮಾನವ ಬಂಧುತ್ವ ವೇದಿಕೆ ಮತ್ತು ಚಳ್ಳಕೆರೆಯ ಅಮಿತ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
-----