ದಾವಣಗೆರೆ: ರಾಜ್ಯದಲ್ಲಿನ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಮುಚ್ಚಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೈ ತೋಳಿಗೆ ಕಪ್ಪುಪಟ್ಟಿ ಧರಿಸಿ ಚಿಗಟೇರಿ ಜಿಲ್ಲಾಸ್ಪತ್ರೆ ಎದುರು ಮೌನ ಪ್ರತಿಭಟನೆ ನಡೆಸಿದರು. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಬಡವರಿಗೆ ಎಲ್ಲ ರೀತಿಯ ಗುಣಮಟ್ಟದ ಔಷಧ ಸಿಗಲಿ ಎಂಬ ಆಶಯದಿಂದ ಕೇಂದ್ರ ಸರ್ಕಾರ ಆರಂಭಿಸಿದ್ದ ಈ ಜನೌಷಧ ಕೇಂದ್ರಗಳನ್ನು ರಾಜಕೀಯ ದ್ವೇಷಕ್ಕೆ ತೆರವು ಮಾಡುವ ರಾಜ್ಯ ಸರ್ಕಾರದ ನೀತಿ ಅಸಂಬದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕಿಸಾನ್ ಸಮ್ಮಾನ್, ರೈತ ವಿದ್ಯಾ ನಿಧಿ ಮೊದಲಾದ ಜನೋಪಯೋಗಿ ಕಾರ್ಯಕ್ರಮಗಳನ್ನು ನಿಲ್ಲಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ಬಡರೋಗಿಗಳ ಪಾಲಿಗೆ ವರದಾನವಾಗಿದ್ದ ಜನೌಷಧ ಕೇಂದ್ರಗಳನ್ನು ಮುಚ್ಚುವ ದುಸ್ಸಾಹಸ ಮಾಡುತ್ತಿರುವ ಸರ್ಕಾರ ಡ್ರಗ್ ಮಾಫಿಯಾದ ಒತ್ತಡಕ್ಕೆ ಮಣಿದಿದೆಯೇ? ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಜನೌಷಧ ಕೇಂದ್ರಗಳಲ್ಲಿ 400ಕ್ಕೂ ಹೆಚ್ಚು ವಿಧದ ಔಷಧಗಳು ಅತ್ಯಂತ ಕಡಿಮೆ ದರದಲ್ಲಿ ಬಡಜನತೆಗೆ ದೊರೆಯುತ್ತಿದ್ದವು. ರಕ್ತದೊತ್ತಡ, ಮಧುಮೇಹ, ನೋವು ನಿವಾರಕ, ರೋಗ ನಿರೋಧಕ ಸೇರಿ ಹಲವು ಬಗೆಯ ಔಷಧ ಲಭ್ಯವಿದ್ದವು. ಇಂತಹ ಕೇಂದ್ರಗಳ ಬಾಗಿಲು ಮುಚ್ಚಿಸುವುದು ಜನವಿರೋಧಿ ನಡೆಯಾಗಿದೆ ಎಂದರು.
ಮೌನ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ಅನಿಲ್ ಕುಮಾರ ನಾಯ್ಕ ಲೋಕಿಕೆರೆ ನಾಗರಾಜ್, ಎಚ್.ಎನ್. ಶಿವಕುಮಾರ್, ಎಲ್.ಎನ್. ಕಲ್ಲೇಶ್, ಆರ್. ಎಲ್.ಶಿವಪ್ರಕಾಶ್, ಶಿವರಾಜ ಪಾಟೀಲ್, ತಾರೇಶನಾಯ್ಕ್, ಸೀಮಾ ಸತೀಶ್, ಚಂದ್ರಶೇಖರ ಸಂಕೋಳ, ನಸೀರ್ ಅಹ್ಮದ್, ಬಸವರಾಜಯ್ಯ, ಪ್ರವೀಣ್ ಜಾಧವ್, ಆವರಗೊಳ್ಳ ಷಣ್ಮುಖಯ್ಯ ಇತರರು ಪಾಲ್ಗೊಂಡಿದ್ದರು