ಜಿಲ್ಲೆ

ಸಾಮಾಜಿಕ ನ್ಯಾಯ ಎಲ್ಲ್ಹೋಯ್ತು ಸಿದ್ರಾಮಣ್ಣ?

ಡಿ. ಎಂ. ಮಹೇಶ್
ದಾವಣಗೆರೆ: ಗ್ಯಾರಂಟಿ ಯೋಜನೆಗಳಿಗಾಗಿ ಬಜೆಟ್‌ನಲ್ಲಿ ದಲಿತರ ಮೀಸಲು ನಿಧಿಗೆ ಕನ್ನ ಹಾಕಲು ಕಾಂಗ್ರೆಸ್ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಪಿಬಿ ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಅಲ್ಲಿನ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿ ವಿರುದ್ಧ ಬಿಜೆಪಿಯು ಸದನದ ಒಳಗೆ ಮತ್ತು ಹೊರಗೆ ಗಂಭೀರ ಹೋರಾಟ ಮಾಡಲಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಕೈಬಿಡದಿದ್ದಲ್ಲಿ ತಾಲೂಕುವಾರು ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಪತ್ರದ ಮೂಲಕ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಕಾಂಗ್ರೆಸ್ ಸರ್ಕಾರ ಎಸ್ಸಿ-ಎಸ್ಟಿ ಜನರ ಹಣ ಕಬಳಿಸುತ್ತಿರುವ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಭರಪೂರ ಕೊಡುಗೆ ನೀಡುತ್ತಿದೆ. ಸಿದ್ದರಾಮಣ್ಣ ಅವರೇ ನಿಮ್ಮ ಸಾಮಾಜಿಕ ನ್ಯಾಯ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು. ದಲಿತರ ಪ್ರತಿನಿಧಿಯಾದ ಶಿವರಾಜ ತಂಗಡಗಿ, ಎಚ್‌ಸಿ. ಮಹದೇವಪ್ಪ ಮೊದಲಾದವರು ದಲಿತರ ನಿಧಿ ದುರ್ಬಳಕೆ ವಿರುದ್ಧ ಚಕಾರ ಎತ್ತುತ್ತಿಲ್ಲ. ಗ್ಯಾರಂಟಿ ಯೋಜನೆಗೆ ದಲಿತರ ಹಣ ಬಳಸಿದರೆ ತಪ್ಪೇನು ಎಂದು ಸಚಿವ ಮಹದೇವಪ್ಪ ಹೇಳುತ್ತಾರೆ. ಬಜೆಟ್‌ನಲ್ಲಿ ಮತ್ತೆ ನಿಧಿಗೆ ಕನ್ನ ಹಾಕಿದರೆ ದಲಿತರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಳಿಸಲಿದ್ದಾರೆ ಎಂದರು. ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ ದಲಿತರ ಕಾಲನಿಗಳಲ್ಲಿ ಸಿಸಿ ರಸ್ತೆ, ವಾಲ್ಮೀಕಿ ಹಾಗೂ ಅಂಬೇಡ್ಕರ್ ಭವನಗಳ ನಿರ್ಮಾಣ ಇನ್ನಿತರೆ ಅಭಿವೃದ್ಧಿ ಕೆಲಸಗಳಾಗಿದ್ದವು. ಈಗಿನ ಸರ್ಕಾರ ದಲಿತರ ಹೆಸರಲ್ಲಿ ಲೂಟಿ ಮಾಡುತ್ತಿದೆ. ವಾಲ್ಮೀಕಿ ನಿಗಮದ ಹಗರಣದ ಮೊತ್ತವನ್ನು ಸ್ವತಃ ಸಿಎಂ ಸದನದಲ್ಲಿ ಒಪ್ಪಿಕೊಂಡಿದ್ದು ದುರಂತ ಎಂದು ಹೇಳಿದರು. ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ ರೈತರು ಮತ್ತು ಜನವಿರೋಧಿ ನೀತಿಗಳನ್ನು ತಳೆದಿರುವ ಕಾಂಗ್ರೆಸ್ ಸರ್ಕಾರ ಈ ಹಿಂದಿದ್ದ ರೈತ ವಿದ್ಯಾನಿಧಿ ಯೋಜನೆಯನ್ನೂ ಸ್ಥಗಿತ ಮಾಡಿತು. ಈ ಸರ್ಕಾರ ಬಹಳ ದಿನ ಇರೋದಿಲ್ಲ ಎಂದರು. ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ ಗ್ಯಾರಂಟಿ ಯೋಜನೆಗಳಿಗಾಗಿ ದಲಿತರ ಹಣದ ಮೇಲೆ ಕಣ್ಣು ಹಾಕುವುದು ಸರಿಯಲ್ಲ. ಸಿದ್ದರಾಮಯ್ಯ ಸರ್ಕಾರ ಹಣದ ಲೂಟಿ ಮುಂದುವರಿಸಿದಲ್ಲಿ ಹೋರಾಟ ತೀವ್ರವಾಗಲಿದೆ ಎಂದರು. ಹಾವೇರಿಯ ಮುಖಂಡ ದ್ಯಾಮಪ್ಪ ಮಾತನಾಡಿ ಐವತ್ತು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್, ಲೂಟಿಯ ಮುಂದುವರಿದ ಭಾಗವಾಗಿ ಎಸ್ಸಿಎಸ್ಟಿ-ಟಿಎಸ್‌ಪಿ ಹಣ ದುರ್ಬಳಕೆ ಮಾಡುತ್ತಿದೆ. ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಹಿಂದೇಟು ಹಾಕಿದ ಕಾಂಗ್ರೆಸ್ ಸಂವಿಧಾನದ ಮೇಲೆ ಪ್ರೀತಿ ತೋರುತ್ತಿದೆ ಎಂದು ಟೀಕಿಸಿದರು. ಮಾಜಿ ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ ದಲಿತರ ಕಾಲನಿಗಳಲ್ಲಿ ಬಿಎಸ್‌ವೈ ಸರ್ಕಾರ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ. ರಾಜೀವ್, ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಎಚ್.ಸಿ.ಜಯಮ್ಮ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಧನಂಜಯ ಕಡ್ಲೇಬಾಳ್, ಅನಿಲ್‌ಕುಮಾರ್ ನಾಯ್ಕ, ಐರಣಿ ಅಣ್ಣೇಶ್, ಜಿಲ್ಲಾ ವಕ್ತಾರ ಕೊಳೇನಹಳ್ಳಿ ಸತೀಶ್, ಪಾಲಿಕೆ ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್, ಸದಸ್ಯ ಎಸ್.ಟಿ. ವೀರೇಶ್, ಮಂಜಾನಯ್ಕ, ಎಚ್.ಪಿ. ವಿಶ್ವಾಸ್, ಎಲ್.ಎನ್. ಕಲ್ಲೇಶ್, ಚಂದ್ರಶೇಖರ ಪೂಜಾರ್, ಸೀತಾರಾಂ, ಟಿಂಕರ್ ಮಂಜಣ್ಣ, ರಮೇಶ್‌ನಾಯ್ಕ ಪಿ.ಸಿ. ಶ್ರೀನಿವಾಸ್, ಗಂಗಾಧರ್ ಭಾಗ್ಯಾ ಪಿಸಾಳೆ, ನೀತು, ಸವಿತಾ ಇತರರಿದ್ದರು. ---