ಜಿಲ್ಲೆ

ಬಿಜೆಪಿ ಅಧ್ಯಕ್ಷರ ಬದಲಾವಣೆ ಮಾತಿಲ್ಲ  ಎಂ.ಪಿ. ರೇಣುಕಾಚಾರ್ಯ  ಅನಿಸಿಕೆ

ದಾವಣಗೆರೆ: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಮಾತೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ  ಸ್ಪಷ್ಟಪಡಿಸಿದರು.  ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನಿ ನರೇಂದ್ರ ಮೋದಿ,ಗೃಹ ಸಚಿವ ಅಮಿತ್ ಷಾ ಅವರೇ ಬಿ.ವೈ. ವಿಜಯೇಂದ್ರ ಅವರನ್ನು  ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ವಿಜಯೇಂದ್ರ ಕೂಡ ವರಿಷ್ಠರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ  ಹೀಗಾಗಿ ಬದಲಾವಣೆ ಸಾಧ್ಯವಿಲ್ಲ ಎನ್ನುವ ಮೂಲಕ ಟೀಕಾಕಾರರಿಗೆ ಟಾಂಗ್ ನೀಡಿದರು.
ಬಿಎಸ್‌ವೈರಿಂದ ಬಿಜೆಪಿಗೆ ಬಲ
ಯಡಿಯೂರಪ್ಪ ಶ್ರೀಮಂತರ ಸಖ್ಯ ಬೆಳೆಸುತ್ತಿದ್ದಾರೆ ಎಂಬ ಶಾಸಕ ಬಿ.ಪಿ. ಹರೀಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರಿಗೆ ಯಡಿಯೂರಪ್ಪ ಅವರೇ ಸಾಟಿ. ಮತ್ತೊಬ್ಬ ಯಡಿಯೂರಪ್ಪ ಬರಲು ಸಾಧ್ಯವಿಲ್ಲ. ಅವರು ಇದ್ದುದರಿಂದಲೇ ಪಕ್ಷ ಬೆಳೆದಿದೆ ಎಂದು ತಿಳಿಸಿದರು.ಕಾಂಗ್ರೆಸ್ ಭಿಕ್ಷೆಯಿಂದಾಗಿ ಶಿಕಾರಿಪುರದಲ್ಲಿ ವಿಜಯೇಂದ್ರ ಗೆದ್ದಿದ್ದಾರೆ ಎಂದು ಹೇಳಿ ಗೊಂದಲ ಮೂಡಿಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಅಲ್ಲಿ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿಯನ್ನು ಹಾಕಿದ್ದೇನೆ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದರು. ಬಿಜೆಪಿ ಈಗಲೂ ಶಿಸ್ತಿನ ಪಕ್ಷ. ಬಿಜೆಪಿ-ಜೆಡಿಎಸ್ ಪಾದಯಾತ್ರೆ ಯಶಸ್ವಿಯಾಗಿದ್ದು, ಕಾಂಗ್ರೆಸ್ ಹತಾಷೆಯಿಂದ ಗೊಂದಲ ಮೂಡಿಸಲು ಮುಂದಾಗಿದೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಬಿ.ಪಿ. ಹರೀಶ್ ಇತರೆ ಮುಖಂಡರಿಗೆ ಪಕ್ಷದಲ್ಲಿ ಅಸಮಾಧಾನವಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಪರಿಹರಿಸಿಕೊಳ್ಳಲಿ ಎಂದು ಹೇಳಿದರು.  ಗ್ಯಾರಂಟಿ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದಲ್ಲೇ ಗೊಂದಲವಿದೆ. ಯಾವುದೇ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ. ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದರು.
ನನ್ನ ರಕ್ತದ ಕಣಕಣದಲ್ಲೂ ಹಿಂದುತ್ವ ಹಾಗೂ ಬಿಜೆಪಿ ಇದೆ. ನಾನು ಬಿಜೆಪಿ ಬಿಡುವುದಾಗಿ ಎಲ್ಲಿಯೂ ಹೇಳಿಲ್ಲ, ಕಾಂಗ್ರೆಸ್‌ಗೆ ಅರ್ಜಿಯನ್ನೂ ಹಾಕಿಲ್ಲ ಎಂದೂ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿ. ದಯಾನಂದ್, ಕೂಲಂಬಿ ಬಸವರಾಜು, ರಾಜು ವೀರಣ್ಣ, ಪ್ರವೀಣ್ ಜಾಧವ್ ಇದ್ದರು.