ದಾವಣಗೆರೆ: ಭೂಮಿ ಕಬಳಿಸುತ್ತಿರುವ ವಕ್ಫ್ ಮಂಡಳಿ ಕುರಿತು ಜಾಗೃತಿ ಮೂಡಿಸಲು ನಮ್ಮ ಭೂಮಿ ನಮ್ಮ ಹಕ್ಕು ಜಾಗೃತಿ ಕಾರ್ಯಕ್ರಮದಡಿ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದ ತಂಡ ಇತ್ತೇಚಿಗೆ ಭೇಟಿ ನೀಡುವ ಜತೆಗೆ ಪಾದಯಾತ್ರೆ ನಡೆಸಿತು.
ಬಿಜೆಪಿ ರಾಜ್ಯ ನಾಯಕರು ಗ್ರಾಮ ಪ್ರವೇಶಿಸುತ್ತಿದ್ದಂತೆ ಹಿಂದು ರುದ್ರಭೂಮಿ ಯವರೆಗೆ ಪಾದಯಾತ್ರೆ ಮಾಡಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಕ್ಫ್ ನೀತಿ ವಿರುದ್ಧ ಆಕ್ರೋಶ ಹೊರಹಾಕಿದರು.
ನಾರಾಯಣ ಸ್ವಾಮಿ ಅವರ ಜತೆಗೆ ಮಾಜಿ ಸಚಿವರಾದ ಸುನಿಲ್ ಕುಮಾರ್, ಬಿ.ಸಿ.ಪಾಟೀಲ್ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕಿದರು.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಬೆಂಬಲದೊಂದಿಗೆ ಹಿಂದುಗಳ, ಮಠ ಮಾನ್ಯಗಳ ಭೂಮಿ ಕಬಳಿಕೆಗೆ ಹುನ್ನಾರ ನಡೆದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಬೆಂಬಲವಿದೆ ಎಂದು ದೂರಿದರು.
ಭಾನುವಳ್ಳಿಯಲ್ಲಿ ರುದ್ರಭೂಮಿಗೆ 3ಎಕರೆ 37 ಗುಂಟೆ ಹಾಗೂ ಖಬರ್ ಸ್ಥಾನಕ್ಕೆ 1ಎಕರೆ ಹಂಚಿಕೆ ಮಾಡಲಾಗಿತ್ತು. ಇತ್ತೀಚಿಗೆ ಪಕ್ಕದ 2 ಎಕರೆ ಸೇರಿಸಿಕೊಂಡು 6 ಎಕರೆ ಜಮೀನನ್ನು ಖಬರಸ್ಥಾನ ಮತ್ತು ವಕ್ಫ್ ಹೆಸರಿಗೆ ನಮೂದಿಸಲಾಗಿದೆ ಎಂದು ಕಿಡಿ ಕಾರಿದರು.
ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅತಿಯಾದ ತುಷ್ಠೀಕರಣದ ಫಲವೇ ಈ ವಕ್ಫ್ ಕಾನೂನು. ಇದರಿಂದ ಹಿಂದುಗಳು ಸಮಸ್ಯೆ ಎದುರಿಸಬೇಕಾಗಿದೆ. ಇನ್ನಾದರೂ ಜಾತಿ ಬಿಟ್ಟು ಒಂದಾಗದಿದ್ದರೆ ಭವಿಷ್ಯದಲ್ಲಿ ನೋವು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ವಕ್ಫ್ ಕಾನೂನಿನಿಂದ ಮುಂದೆ ಮನೆ ಮತ್ತು ಮನೆಯವರನ್ನು ಕಿತ್ತುಕೊಳ್ಳಬಹುದು.ಈ ಬಗ್ಗೆ ಜಾಗೃತ ರಾಗಬೇಕಿದೆ. ವಕ್ಫ್ ಸಚಿವರ, ಅಧಿಕಾರಿಗಳ ಉದ್ದಟತನಕ್ಕೆ ಕಡಿವಾಣ ಹಾಕಬೇಕು.ರೈತರ ಒಂದಿಂಚು ಭೂಮಿ ಬಿಡುವುದಿಲ್ಲ ಎಂದು ಗುಡುಗಿದರು.
ಮಾಜಿ ಸಚಿವ ವಿ. ಸುನೀಲ್ ಕುಮಾರ್, ಮಾಜಿ ಶಾಸಕ ವೈ.ಎ. ನಾರಾಯಣ ಸ್ವಾಮಿ, ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಎಚ್.ಪಿ. ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಚಂದ್ರಶೇಖರ ಪೂಜಾರ್, ಮಾಡಾಳು ಮಲ್ಲಿಕಾರ್ಜುನ್, ಎಸ್.ಎಂ. ವೀರೇಶ್,ಧನಂಜಯ್ ಕಡ್ಲೆಬಾಳು, ಅಣ್ಣಪ್ಪ ಐರಣಿ, ಎಚ್.ಪಿ. ಲಿಂಗ ರಾಜ್, ಕೆ.ಎನ್. ಹಳ್ಳಿ ಮಹಾಂತೇಶ್, ವೀರೇಶ್ ಅದಾಪುರ, ಶ್ರೀನಿವಾಸ್ ದಾಸಕರಿಯಪ್ಪ ಇತರರಿದ್ದರು.
ಶಾಸಕ ಹರೀಶ್ ಗೈರು
ಹರಿಹರ ವಿಧಾನಸಭೆ ಕ್ಷೇತ್ರದ ಭಾನುವಳ್ಳಿಯಲ್ಲಿ ಆಯೋಜಿಸಿದ್ದ ಪಾದಯಾತ್ರೆ ಹಾಗೂ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಗೈರು ಎದ್ದು ಕಾಣುತ್ತಿತ್ತು.
ಗುಂಡಿ ಮುಚ್ಚದವ್ರು ಸಮಾವೇಶ ಮಾಡ್ತಾರೆ
ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ರಸ್ತೆ ಗುಂಡಿ ಮುಚ್ಚಲು ಆಗದವರು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಉಪಚುನಾವಣೆ ಗೆಲುವು ನಿಮಗೆ ಭ್ರಷ್ಟಾಚಾರ ಮಾಡಲು ನೀಡಿದ ಲೈಸೆನ್ಸ್ ಅಲ್ಲ. ಅಧಿಕಾರವಿದ್ದ ಸರ್ಕಾರದ ಪರ ಫಲಿತಾಂಶ ಬರುವುದು ಸಹಜ. ಜನ ತಿರುಗಿ ಬೀಳುವ ಸಮಯ ದೂರವಿಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಕುಟುಕಿದರು.
ಬಸವಣ್ಣನವರ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೆ ಸಹಿಸಲು ಆಗುವುದಿಲ್ಲ. ಈ ವಿಷಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೈಗೊಳ್ಳುವ ನಿರ್ಧಾರಕ್ಕೆ ನನ್ನ ಬೆಂಬಲವಿದೆ.
ಬಿ.ಸಿ. ಪಾಟೀಲ್, ಮಾಜಿ ಸಚಿವ