ದಾವಣಗೆರೆ: ಸಾಹಿತ್ಯ ದಿಗ್ಗಜ ಎಸ್.ಎಲ್. ಭೈರಪ್ಪ ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದರು. ಮರಣೋತ್ತರವಾಗಿಯಾದರೂ ಈ ಗೌರವ ಸಿಗಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಗೌರವಾರ್ಥ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ, ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಕನ್ನಡ ಸಾಹಿತ್ಯದ ಹೆಸರಾಂತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ನಷ್ಟವಾಗಿದೆ. ಕಾದಂಬರಿ ಲೋಕದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ್ದ ಅವರು ಓದುಗ ಬಳಗವನ್ನು ಹೊಂದಿದ್ದರು. ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಮೊದಲಾದ ಪ್ರಶಸ್ತಿಗಳು ಅವರ ಸಾಹಿತ್ಯ ಕೃಷಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.
ಭೈರಪ್ಪ ಅವರ ಒಡನಾಡಿ ಪ್ರೊ.ಎಂ.ಆರ್.ನಾಗರಾಜ್ ಮಾತನಾಡಿ ಭೈರಪ್ಪ ಅವರ ಬಹುತೇಕ ಬರಹಗಳು ಅನುಭವ, ಅಧ್ಯಯನ, ಅಧ್ಯಾಪನ ಆಧಾರಿತವಾಗಿದ್ದವು. ಓದುಗರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆಯುವುದೇ ಎಲ್ಲ ಪ್ರಶಸ್ತಿಗಳಿಗಿಂತ ಶ್ರೇಷ್ಠ ಎಂದೇ ಭಾವಿಸಿದ್ದರು ಎಂದರು. ಅವರ ವಂಶವೃಕ್ಷ, ಗೃಹಭಂಗ, ನಿರಾಕರಣ, ಪರ್ವ ಕಾದಂಬರಿಗಳನ್ನು ಉಲ್ಲೇಖಿಸಿ ಅವುಗಳಲ್ಲಿರುವ ಶ್ರೇಷ್ಠ ಅಂಶಗಳ ಬಗ್ಗೆಯೂ ಮೆಲುಕು ಹಾಕಿದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ಭೈರಪ್ಪ ಅವರು ತೀಕ್ಷ್ಣ, ತಾತ್ವಿಕ ವಿಚಾರಭರಿತ ಕಾದಂಬರಿಗಳೊಂದಿಗೆ ಓದುಗರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದಾರೆ. ಮಾನವ ಸಂಬಂಧಗಳ ಸಂಕೀರ್ಣ, ತಲೆಮಾರುಗಳ ಸಂಘರ್ಷ, ಸಾಮಾಜಿಕ ಮೌಲ್ಯಗಳ ಸ್ಥಿತ್ಯಂತರ, ಭಾರತೀಯ ಪರಂಪರೆಯ ಆಳ ವಿಶ್ಲೇಷಣೆ ಕಟ್ಟಿಕೊಡುವ ಅವರ ಶೈಲಿ ಅನನ್ಯ ಎಂದು ಸ್ಮರಿಸಿದರು.
ಭೈರಪ್ಪ ಅವರ ಜೀವನ ಮತ್ತು ಬರಹಗಳ ಬಗ್ಗೆ ಶಿಕ್ಷಣ ತಜ್ಞ ಡಾ.ಎಚ್.ವಿ.ವಾಮದೇವಪ್ಪ, ಸರ್ ಎಂವಿ ಕಾಲೇಜಿನ ಕಾರ್ಯದರ್ಶಿ ಎಸ್.ಜೆ.ಶ್ರೀಧರ್, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಚ್.ಎಸ್. ಮಂಜುನಾಥ್, ಹಿರಿಯ ಸಾಹಿತಿ ಜಿ.ಕೆ.ಕುಲಕರ್ಣಿ, ಬಿ.ಆರ್.ಸುಬ್ರಹ್ಮಣ್ಯ, ಎಸ್.ಎಂ.ಮಲ್ಲಮ್ಮ, ವೀಣಾ ಕೃಷ್ಣಮೂರ್ತಿ, ಟಿ.ಎಸ್.ಶೈಲಜಾ, ಛಾಯಾ ಶ್ರೀಧರ್, ಸತ್ಯಭಾಮಾ ಮಂಜುನಾಥ್, ಸಿ.ಜಿ.ಜಗದೀಶ್ ಮಾತನಾಡಿದರು.
ಬಿ.ದಿಳ್ಯಪ್ಪ, ಕೆ.ಶಿವಶಂಕರ್, ಬಿ.ಎಂ.ಭೈರವೇಶ್ವರ, ಬೇತೂರು ಷಡಾಕ್ಷರಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ, ಅಣಬೇರು ತಾರೇಶ್, ಎ.ಪರಮೇಶ್ವರಪ್ಪ, ಡಾ.ರುದ್ರಮುನಿ ಹಿರೇಮಠ, ಎಚ್.ಎನ್. ಶಿವಕುಮಾರ್, ಜಿಗಳಿ ಪ್ರಕಾಶ್ ಇತರರಿದ್ದರು.
---