ಜಿಲ್ಲೆ

ಭದ್ರಾ ಡ್ಯಾಮ್‌ಗಿಂದು ಬಿಜೆಪಿ ರೈತ ಮೋರ್ಚಾ ಭೇಟಿ   ಕಾಮಗಾರಿ ಪರಿಶೀಲಿಸಿ ಪ್ರತಿಭಟನೆಗೆ ನಿರ್ಧಾರ

ಡಿ. ಎಂ. ಮಹೇಶ್

ದಾವಣಗೆರೆ: ಭದ್ರಾ ಜಲಾಶಯದ ನೀರು ಸೋರಿಕೆ ತಡೆಗೆ ನಡೆಸಲಾಗುತ್ತಿರುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜು.8ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈ ವಿಚಾರದಲ್ಲಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದಿದ್ದಲ್ಲಿ ಪ್ರತಿಭಟನೆ ನಡೆಸುವ ಇರಾದೆ ಇದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಭದ್ರಾ ಜಲಾಶಯದ ಗೇಟ್ ದುರಸ್ತಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಜಲಾಶಯದ ಎಮರ್ಜೆನ್ಸಿ ಗೇಟ್‌ಗೆ ಕಾಂಕ್ರೀಟ್ ಹಾಕಲಾಗಿಲ್ಲ. ಅಲ್ಲದೆ, ತೆರೆಯಲಾಗಿದ್ದ ಗೇಟ್‌ಗಳು ಮುಚ್ಚಲಾಗದಷ್ಟು ಜಾಮ್ ಆಗಿದೆ. ಇದರಿಂದಾಗಿ ನಿತ್ಯವೂ ಐದು ಸಾವಿರ ಕ್ಯುಸೆಕ್ ನೀ ನದಿಯಲ್ಲಿ ವ್ಯರ್ಥವಾಗಿ ಹರಿಯುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಭದ್ರಾ ಡ್ಯಾಂ ನೀರಿನತ್ತ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಡ್ಯಾಂ ತುಂಬುವ ಮುನ್ನವೇ ಗೇಟ್ ದುರಸ್ತಿಗೆ ಗಮನ ಹರಿಸಬೇಕಿದ್ದ ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷೃತನ ಎದ್ದು ಕಾಣುತ್ತಿದೆ. ಚುನಾವಣೆ ಮುಗಿದು ಎರಡು ತಿಂಗಳಾದರೂ ಇದರ ಬಗ್ಗೆ ಗಮನ ಹರಿಸಿಲ್ಲ. ದುರಸ್ತಿಗೆ ಹಣ ನೀಡದ ಸರ್ಕಾರ ರೈತ ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೇಟ್ ದುರಸ್ತಿ ಕಾಮಗಾರಿ ಸ್ಥಳಕ್ಕೆ ಜು.8ರಂದು ಬೆಳಗ್ಗೆ 11 ಕ್ಕೆ ನಾವು ತೆರಳುತ್ತಿದ್ದು ಜಿಲ್ಲೆಯ ರೈತರು ಸ್ವಯಂಪ್ರೇರಿತರಾಗಿ ರೊಟ್ಟಿ-ಬುತ್ತಿಯೊಂದಿಗೆ ಬರಬೇಕು. ನಾಲ್ಕು ದಿನದ ಹಿಂದೆಯೇ ನಾವು ದೂರು ನೀಡಿದ್ದೆವು. ಸ್ಥಳ ಭೇಟಿ ನಂತರವೂ ನಮಗೆ ಕೆಲಸ ತೃಪ್ತಿಕರವಾಗಿಲ್ಲ ಎನಿಸಿದಲ್ಲಿ ಧರಣಿ ಕೂರಲಿದ್ದೇವೆ ಎಂದರು.
ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಮಳೆ ಕೊರತೆಯಾಗಿರುವ ಕಾರಣ ಜಿಲ್ಲೆಯ ರೈತರು ಭದ್ರಾ ನಾಲೆಯಲ್ಲಿ ನೀರಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಈ ಹೊತ್ತಿಗೆ ಡ್ಯಾಮ್‌ನಲ್ಲಿ 138.1 ಅಡಿ ನೀರಿತ್ತು. ನೀರು ಸೋರಿಕೆ ಕಾರಣಕ್ಕೆ ಇಂದಿನ ಜಲಾಶಯದ ನೀರಿನ ಮಟ್ಟ 131.10 ಅಡಿಯಷ್ಟಿದೆ. ಅಧಿಕಾರಿಗಳ ನಿರ್ಲಕ್ಷೃಕ್ಕೆ ಇದು ಸಾಕ್ಷಿಯಾಗಿದೆ. ನೀರು ಸೋರಿಕೆ ತಡೆಗೆ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲೋಕಿಕೆರೆ ನಾಗರಾಜ್, ಚಂದ್ರಶೇಖರ ಪೂಜಾರ್, ಬಾತಿ ಶಿವಕುಮಾರ್, ಕೊಳೇನಹಳ್ಳಿ ಬಿ.ಎಂ. ಸತೀಶ್, ಪ್ರವೀಣ್ ಜಾಧವ್, ಆರನೇಕಲ್ಲು ವಿಜಯಕುಮಾರ್ ಇತರರಿದ್ದರು.