ದಾವಣಗೆರೆ: ನಗರದ ದೃಶ್ಯಕಲಾ ಕಾಲೇಜು ಆವರಣದ 1.5 ಎಕರೆ ಪ್ರದೇಶದಲ್ಲಿ, ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಾಣಗೊಂಡಿರುವ ಥೀಮ್ ಪಾರ್ಕ್ ಹಾಗೂ ಗ್ರೀಕ್ ಶೈಲಿಯ ಬಯಲು ರಂಗಮಂದಿರ ಡಿ. 1ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳಲಿದೆ.
ಸರ್ಕಾರದ 5 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡು ಈ ಹಿಂದೆ ಉದ್ಘಾಟನೆಯಾಗಿದ್ದ ಥೀಮ್ ಪಾರ್ಕ್ ಕೆಲ ಕಾಮಗಾರಿಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ತಡವಾಗಿ ವೀಕ್ಷಣೆಗೆ ತೆರೆದುಕೊಳ್ಳುತ್ತಿದೆ ಎಂದು ದಾವಣಗೆರೆ ವಿವಿ ಕುಲಪತಿ ಡಾ.ಡಿ.ಬಿ. ಕುಂಬಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮೀಣ ಪರಿಸರದ ವೈವಿಧ್ಯ ಜೀವನಶೈಲಿ ಬಿಂಬಿಸುವ, ಮಕ್ಕಳಲ್ಲಿ ಗ್ರಾಮೀಣ ಕಲ, ಸಂಸ್ಕೃತಿಯನ್ನು ಶಿಲ್ಪಗಳ ಮೂಲಕ ಪರಿಚಯಿಸುವ ಈ ಥೀಮ್ ಪಾರ್ಕ್ ಜಿಲ್ಲೆಯ ಆಕರ್ಷಣೆಯ ಕಲಾ ಕೇಂದ್ರವಾಗಿದೆ. ವಿದ್ಯಾರ್ಥಿಗಳಿಗೆ ಮನರಂಜನೆ ಜತೆಗೆ ಸಾಂಪ್ರದಾಯಿಕ ಕೃಷಿ, ಹಳ್ಳಿಗಾಡಿನ ವೃತ್ತಿಗಳ ಪರಿಚಯಿಸಲಿದೆ ಎಂದರು.
ಥೀಮ್ ಪಾರ್ಕ್ ನಿರ್ವಹಣೆ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ 20 ರೂ., ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ-ಕಾಲೇಜು ವಾರ್ಷಿಕೋತ್ಸವ, ಸಂಘ ಸಂಸ್ಥೆಗಳು ವೃತ್ತಿ ಕಲಾವಿದರ ನಾಟಕೋತ್ಸವ ಹಾಗೂ ವಾಣಿಜ್ಯ ಪ್ರದರ್ಶನಗಳಿಗೆ ಶುಲ್ಕ ನಿಗದಿ ಮಾಡಲಾಗಿದೆ.
ಶುಲ್ಕದ ಹಣ ಸಂಗ್ರಹಿಸಲು ಪ್ರತ್ಯೇಕ ಖಾತೆ ತೆರೆದು ವ್ಯವಹರಿಸಲಾಗುವುದು. ಸದ್ಯಕ್ಕೆ ಸುಮಾರು 8 ಸಿಬ್ಬಂದಿ ಅಗತ್ಯವಿದ್ದು ಮಾಸಿಕ ಸುಮಾರು 4 ಲಕ್ಷ ರೂ. ಅನಿವಾರ್ಯವಾಗಲಿದೆ. ಥೀಮ್ ಪಾರ್ಕ್‌ಗೆ ಬರುವ ರಸ್ತೆ ಅಭಿವೃದ್ಧಿ ಸಂಬಂಧ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಲ್ಲಿ ಮನವಿ ಮಾಡಿದ್ದು ಇನ್ನು 2-3 ತಿಂಗಳಲ್ಲಿ ಇದರ ವ್ಯವಸ್ಥೆ ಆಗುವ ಭರವಸೆ ಇದೆ ಎಂದರು.
ಥೀಮ್ ಪಾರ್ಕ್‌ಗೆ ಬರುವ ಜನರಿಗೆ ಕುಡಿವ ನೀರು, ಶೌಚಗೃಹಗಳ ವ್ಯವಸ್ಥೆ ಇದೆ. ಉಪಾಹಾರ ಸೇವಿಸಲು ಪಾರ್ಕ್ ಹೊರಗೆ ಕ್ಯಾಂಟೀನ್ ನಿರ್ಮಿಸುವ ಆಲೋಚನೆ ಇದೆ. ಮುಂಬರುವ ದಿನದಲ್ಲಿ ಕಲಾಗ್ಯಾಲರಿ, ಥೀಮ್ ಗಾರ್ಡನ್, ಕಲಾಕೃತಿಗಳ ವಸ್ತು ಸಂಗ್ರಹಾಲಯ, ಚಿತ್ರಕಲಾ ಪ್ರದರ್ಶನ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಆಸಕ್ತ ಸಾರ್ವಜನಿಕರು, ಸಂಸ್ಥೆಗಳು, ಶಾಲಾ-ಕಾಲೇಜುಗಳು ಕಾಲೇಜಿನ ವೆಬ್‌ಸೈಟ್ ಡಿಡಿಡಿ.ಚ್ಞಜಛ್ಟಿಛ್ಠ್ಞಿಜಿಛ್ಟಿಜಿಠಿ.ಚ್ಚ.ಜ್ಞಿ ಇಲ್ಲಿಗೆ ಅಥವಾ ಮಾಹಿತಿಗೆ 9986687098 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬಾ.ಮಾ. ಬಸವರಾಜಯ್ಯ, ರಂಗಕರ್ಮಿ ಎಸ್.ಎಸ್. ಸಿದ್ದರಾಜು, ಎ. ಮಹಲಿಂಗಪ್ಪ, ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ, ಶಿವಕುಮಾರ್ ಕಣಸೋಗಿ ಇದ್ದರು.
---