ಜಿಲ್ಲೆ

ಶಿಕ್ಷಣದ ಜತೆಗೆ ಶಿಸ್ತಿನ ಜೀವನ ರೂಢಿಸಿಕೊಳ್ಳಿ   ಬಾಲಕರ ಬಿಸಿಎಂ ಹಾಸ್ಟೆಲ್ ಕಟ್ಟಡ ಉದ್ಘಾಟನೆ

ಡಿ. ಎಂ. ಮಹೇಶ್

ದಾವಣಗೆರೆ: ಕಾಲೇಜು ಶಿಕ್ಷಣ ಹಂತ ವಿದ್ಯಾರ್ಥಿ ಜೀವನದ ಉತ್ತಮ ಕಾಲಘಟ್ಟ. ಇದನ್ನು ಸರಿಯಾಗಿ ಬಳಸಿಕೊಂಡು ಶಿಕ್ಷಣ ಪಡೆಯುವ ಜತೆಗೆ ಶಿಸ್ತಿನ ಜೀವನ ರೂಢಿಸಿಕೊಳ್ಳಿ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ದಾವಣಗೆರೆ ಹೊರವಲಯದ ಬೂದಿಹಾಳ್ ರಸ್ತೆಯಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಿರ್ಮಿಸಲಾದ  ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ವ್ಯಾಸಂಗದ ಜತೆಜತೆಯಲ್ಲೇ ಎನ್‌ಸಿಸಿ, ಎನ್ನೆಸ್ಸೆಸ್ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿಯೂ ಭಾಗವಹಿಸಿ ಎಂದ ಅವರು, ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳಿದ್ದಲ್ಲಿ ಧೈರ್ಯವಾಗಿ ನನ್ನ ಬಳಿ ಚರ್ಚೆ ಮಾಡಬಹುದು ಎಂದು ತಿಳಿಸಿದರು.
ಪಾಲಕರು ಹಾಗೂ ಶಿಕ್ಷಕರ ಶ್ರಮಕ್ಕೆ ತಕ್ಕ ಬೆಲೆ ನೀಡಲು ಶ್ರದ್ಧೆಯಿಂದ ಓದಿ ಮಾದರಿ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಬೇರೆಡೆಗೆ ಗಮನ ಹರಿಸಬಾರದು. ಇತ್ತೀಚೆಗೆ ವಿದ್ಯಾರ್ಥಿಗಳು ಟಿವಿ, ಮೊಬೈಲ್ ನೋಡುವುದರಲ್ಲಿ ಕಾಲಹರಣ ಮಾಡುತ್ತ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜ್ಞಾನಾರ್ಜನೆಗಾಗಿ ಸಮಯ ಮೀಸಲಿಡಿ ಎಂದು ಹೇಳಿದರು.  
ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಬೇಡಿ, ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಅಂಕಗಳನ್ನು ಪಡೆದರೆ ಮುಂದಿನ ಜೀವನವನ್ನು ಸುಭದ್ರ ಮಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮೇಯರ್ ಬಿ.ಎಚ್. ವಿನಾಯಕ, ಪಾಲಿಕೆ ಸದಸ್ಯರಾದ ಜಿ.ಡಿ.ಪ್ರಕಾಶ್, ಅಬ್ದುಲ್ ಕಬೀರ್‌ಖಾನ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್,  ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ನಾಗರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬೇಬಿ ಸುನೀತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎಚ್.ಗಾಯತ್ರಿ ಹಾಗೂ ಇತರರಿದ್ದರು.
---