ಜಿಲ್ಲೆ

ಬಸವ ತತ್ವ ಪಾಲನೆಯಿಂದ ಬದುಕು ಸಾರ್ಥಕ  ಶಿವಲಿಂಗ ಸ್ವಾಮೀಜಿ ಹೇಳಿಕೆ  ಚುಸಾಪದಿಂದ ಬಸವೇಶ್ವರ ಜಯಂತಿ

ಡಿ. ಎಂ. ಮಹೇಶ್

ದಾವಣಗೆರೆ: ಮಾನವತಾವಾದಿ ಬಸವೇಶ್ವರರ ತತ್ವಗಳನ್ನು ಕಿಂಚಿತ್ತಾದರೂ ಅಳವಡಿಸಿಕೊಂಡು ನಡೆದಾಗ ಬದುಕು ಸಾರ್ಥಕವಾಗಲಿದೆ ಎಂದು ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ತೆಲಗಿಯ ಸ್ಫೂರ್ತಿ ಪ್ರಕಾಶನ ಸಹಯೋಗದಲ್ಲಿ ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ಬದುಕಿದಾಗ ಶಾಂತಿ-ನೆಮ್ಮದಿ ಸಿಗಲಿದೆ. ಹಾಗಾಗಿ ತತ್ವಬದ್ಧ ಆದರ್ಶದೊಂದಿಗೆ ಇಟ್ಟ ಗುರಿ ತಲುಪಬೇಕು. ಸಾಧಕರ ಬದುಕಿನ ಮೌಲ್ಯಗಳು ನಮ್ಮ ಜೀವನಕ್ಕೆ ದಾರಿದೀಪವಾಗಬೇಕು ಎಂದರು.
ಸಾಧು-ಸಂತರ ಗುಣಗಳಿಂದ ಪ್ರಚೋದಿತರಾಗಿ ಪ್ರಚಾರ ಮಾಡಿದಾಗ ಸಜ್ಜನರಾಗಬಹುದು. ನಮ್ಮೊಳಗೆ ಸದಾಚಾರ ರೂಢಿಸಿಕೊಂಡಲ್ಲಿ ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಮಾನಸಿಕ ಸ್ವಾಸ್ಥೃ ಕಾಪಾಡಿಕೊಳ್ಳಲು ಸಾಹಿತ್ಯ ಮತ್ತು ಸಂಗೀತದ ಮೊರೆ ಹೋಗಬೇಕು. ಕೇವಲ ತಪಸ್ಸು, ಪೂಜೆ ಮಾಡುವುದೇ ಆಧ್ಯಾತ್ಮವಲ್ಲ. ಸೇವೆಯಲ್ಲಿ ಸಮರ್ಪಿಸಿಕೊಳ್ಳುವುದೇ ಆಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಜಯಮ್ಮ ನೀಲಗುಂದ, ಹೆತ್ತವರು, ಭೂಮಿ ಹಗೂ ದೇಶದ ಋಣ ತೀರಿಸಲು ಸಾಧ್ಯವಿಲ್ಲ. ರಾಜಶೇಖರ ಗುಂಡಗಟ್ಟಿ ತಮ್ಮ ಪಾಲಕರ ಸ್ಮರಣಾರ್ಥ ಪ್ರತಿ ವರ್ಷ ಸಾಧಕರಿಗೆ ವಿಶ್ವಗುರು ಬಸವಶ್ರೀ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಹಾಲಪ್ಪ ವೀರಪ್ಪ ಗುಂಡಗಟ್ಟಿ ಹಾಗೂ ಮಹಾದೇವನ ಅವರ ಸ್ಮರಣಾರ್ಥವಾಗಿ ವಿಶ್ವಗುರು ಬಸವಶ್ರೀ ಪ್ರಶಸ್ತಿಯನ್ನು ಕನ್ನಡ ಪಂಡಿತ ಎಸ್.ಎಂ. ರುದ್ರಮುನಿ ಅವರಿಗೆ ಹಾಗೂ ರಕ್ಷಕಶ್ರೀ ಪ್ರಶಸ್ತಿ ನಿವೃತ್ತ ಯೋಧ ಎಂ.ಎಸ್. ರಾಮಚಂದ್ರಪ್ಪ ಅವರಿಗೆ ನೀಡಿ ಗೌರವಿಸಲಾಯಿತು.
ಶರಣರ ದೃಷ್ಟಿಯಲ್ಲಿ ಬಸವಣ್ಣ ವಿಷಯ ಕುರಿತು ಶರಣ ಸಾಹಿತ್ಯ ಪರಿಷತ್ತಿನ ಹರಪನಹಳ್ಳಿ ತಾಲೂಕು ಘಟಕ ಅಧ್ಯಕ್ಷ ಷಣ್ಮುಖಪ್ಪ ಪೂಜಾರ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ ಗುಂಡಗಟ್ಟಿ, ಸಾಹಿತಿ ಯು.ಎನ್. ಸಂಗನಾಳಮಠ, ಸ್ಫೂರ್ತಿ ಪ್ರಕಾಶನ ಅಧ್ಯಕ್ಷ ಎಂ. ಬಸವರಾಜ, ಉಮಾದೇವಿ ಎಸ್. ಹಿರೇಮಠ, ಓಂಕಾರಯ್ಯ ಎಸ್. ತವನಿಧಿ, ಸುನೀತಾ, ವೀರಭದ್ರಪ್ಪ ತೆಲಗಿ, ಬಿ.ಎಂ.ಜಿ. ವೀರೇಶ್ ಇತರರಿದ್ದರು.
----