ದಾವಣಗೆರೆ: ಬಸವಣ್ಣ ಕೇವಲ ಲಿಂಗಾಯತರ, ಕನ್ನಡಿಗರ ಸ್ವತ್ತಲ್ಲ. ಇಡೀ ಮಾನವ ಕುಲಕ್ಕೆ ಬೇಕಾದ ವಿಶ್ವಗುರು. ಅವರೊಬ್ಬ ಸಮಸಮಾಜದ ಪಿತಾಮಹ, ಮಹಾ ಮಾನವತಾವಾದಿ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ(ವೀರಶೈವ) ತರುಣ ಸಂಘದ ಸಹಯೋಗದಲ್ಲಿ ಬಸವ ಜಯಂತ್ಯುತ್ಸವಸ ನಿಮಿತ್ತ ಶನಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ 108ನೇ ವರ್ಷದ ಬಸವ ಪ್ರಭಾತ್ ಪೇರಿಯ ಮೊದಲ ದಿನದ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬಸವ ತತ್ವ ಪಾಲನೆಯಿಂದ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಕಾಯಕ, ದಾಸೋಹ ಹಾಗೂ ಬಸವ ತತ್ವಗಳ ಅನುಸರಣೆಯಲ್ಲಿ ದೇಶದ ಉದ್ಧಾರವಿದೆ. ಅವಿದ್ದಲ್ಲಿ ದೇಶಗಳ ನಡುವೆ, ಮನಸ್ಸುಗಳ ನಡುವೆ ಯುದ್ಧಗಳು ಸಂಭವಿಸುವುದಿಲ್ಲ. ಕುಟುಂಬಗಳಲ್ಲಿ ಶಾಂತಿ-ನೆಮ್ಮದಿ ಇರಲಿದೆ ಎಂದರು.
ದಾವಣಗೆರೆ ವಿರಕ್ತಮಠದಲ್ಲಿ 1913ರಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತ್ಯುತ್ಸವಕ್ಕೆ ಚಾಲನೆ ಸಿಕ್ಕಿತು. ಜಯದೇವ ಜಗದ್ಗುರು, ಮೃತ್ಯುಂಜಯ ಅಪ್ಪಗಳು ಹಾಗೂ ಹರ್ಡೇಕರ್ ಮಂಜಪ್ಪ ಅವರು ಇದರ ರೂವಾರಿಗಳು ಎಂದರು.
ಜನರು ಸ್ವಾತಂತ್ರೃ ಬಯಸುತ್ತಾರೆ ಎಂಬ ಕಾರಣಕ್ಕೆ ಜನಸಂದಣಿಗೆ ಬ್ರಿಟೀಷರು ಅವಕಾಶ ನೀಡುತ್ತಿರಲಿಲ್ಲ.ಹಾಗೆ ಮಾಡಿದರೆಂದರೆ ಗುಂಡೇಟಿಗೆ ಬಲಿ ಆಗುವ ಸನ್ನಿವೇಶವಿತ್ತು. ಆಗ ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರು ಗಣೇಶನ ಹಬ್ಬ ಮಾಡಿ ಜನಸಂಘಟನೆ ಮಾಡಿ ಸ್ವಾತಂತ್ರೃದ ಕಿಚ್ಚು ಹಚ್ಚಿಸಿದರು. ಅದೇ ರೀತಿ 1917ರಲ್ಲಿ ಹರ್ಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಬಸವ ಪ್ರಭಾತ್ ಪೇರಿ ಶುರು ಮಾಡಿದರು. ಅಂದಿನಿಂದ 108 ವರ್ಷದವರೆಗೂ ದಾವಣಗೆರೆಯ ವಿರಕ್ತಮಠ ಬಸವ ತತ್ವಗಳನ್ನು ಪ್ರತಿ ಮನೆ-ಮನಗಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.
ಬಸವಣ್ಣನವರು ನೀಡಿದ ಸಮಾನತೆ, ಕಾಯಕ, ದಾಸೋಹ, ವಿಶ್ವ ಪ್ರೇಮ ಎಲ್ಲವೂ ಭಾರತದ ಸಂವಿಧಾನದಲ್ಲಿವೆ. ಬಸವಣ್ಣ ಮೊಟ್ಟಮೊದಲ ಪ್ರಜಾಪ್ರಭುತ್ವದ ಪರಿಕಲ್ಪನೆಯ ಪಿತಾಮಹ ಎಂಬ ಕಾರಣಕ್ಕೆ ಬ್ರಿಟೀಷರು ಥೇಮ್ಸ್ ನದಿ ದಂಡೆಯ ಮೇಲೆ ಅವರ ಪ್ರತಿಮೆ ಪ್ರತಿಷ್ಠಾಪಿಸಿದರು. ವಿದೇಶಿಗರಿಗೆ ಅರ್ಥವಾಗುವ ಈ ಕಾಯಕಯೋಗಿ, ನಮ್ಮ ದೇಶದ ಜನರಿಗೆ ಇನ್ನೂ ಅರ್ಥವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುರುಮಠಕಲ್ ಮುರುಘಶಾಂತವೀರ ಸ್ವಾಮೀಜಿ, ಹಿರಿಯೂರಿನ ಆದಿಜಾಂಬವ ಮಠದ ಷಡಕ್ಷರಿಮುನಿ ಸ್ವಾಮೀಜಿ, ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ, ಕುದರಿ ಉಮೇಶ, ಚನ್ನಬಸವ ಶೀಲವಂತ್, ಮಹಾದೇವಮ್ಮ, ಮಹಾಲಿಂಗೇಶ್ವರ, ಶಿವಬಸಮ್ಮ, ವೀಣಾ ಮಂಜುನಾಥ, ಮಲ್ಲಿಕಾರ್ಜುನ್, ಜಯರಾಜ್, ಬಿ.ಎಚ್.ವೀರಭದ್ರಪ್ಪ, ಹನುಮಂತಪ್ಪ, ವಿರಕ್ತಮಠ ಶಾಲೆಯ ರೋಷನ್, ಬಕ್ಕೇಶ್ವರ ಶಾಲೆ ಶಿಕ್ಷಕರಿದ್ದರು. ವಿರಕ್ತಮಠ ಆವರಣದಿಂದ ಆರಂಭವಾದ ಬಸವಪ್ರಭಾತ್ ಪೇರಿ ನಗರದ ವಿವಿಧ ರಸ್ತೆಗಳಲ್ಲಿ ಸಾಗಿತು. ಬಸವ ಕಲಾಲೋಕ ತಂಡದವರು ವಚನ ಸಂಗೀತ ಹಾಡಿದರು.
---