ಜಿಲ್ಲೆ

ಬ್ಯಾಂಕ್‌ಗಳಲ್ಲಿ ಪಾರದರ್ಶಕತೆ ಅವಶ್ಯಕ

ದಾವಣಗೆರೆ: ಬ್ಯಾಂಕುಗಳು ಜನರ ನಂಬಿಕೆ ಗಳಿಸಲು ಪಾರದರ್ಶಕತೆ, ನೈತಿಕತೆ ಮತ್ತು ಸ್ಪಷ್ಟ ಸಂವಹನಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕುಗಳಲ್ಲಿ ಭದ್ರತೆ ಇಲ್ಲದಿದ್ದರೆ ಸಾರ್ವಜನಿಕರು ಯಾರನ್ನು ನಂಬಬೇಕು. ಭದ್ರತೆಯ ಬಗ್ಗೆ ಹೆಚ್ಚಿನ ಗಮನವಿಡಬೇಕು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಬ್ಯಾಂಕಿನ ನಿಯಮ, ನಿಬಂಧನೆ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಬ್ಯಾಂಕ್ ವ್ಯವಹಾರ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಪ್ರಸ್ತುತ ಬಡ್ಡಿ ದರಗಳು ಜನರಿಗೆ ತೀರಾ ಕಷ್ಟಕರ ಎನಿಸಿವೆ. ಹೀಗಾಗಿ ಜನರ ಕೈಗೆಟುಕುವಂತೆ ಬಡ್ಡಿ ದರ ನಿಗದಿ ಮಾಡಬೇಕು. ಹೃದಯವಂತಿಕೆಯಿಂದ ಜನರಿಗೆ ಸಾಲದ ವಿವರಗಳ ಮಾಹಿತಿ ನೀಡಿ. ಸಮಯಕ್ಕೆ ತೀರಿಸದಿದ್ದರೆೆ ಒಂದೆರಡು ತಿಂಗಳ ಕಾಲಾವಕಾಶ ನೀಡಬೇಕು ಎಂದು ತಿಳಿಸಿದರು.
ಎಸ್‌ಪಿ ಉಮಾ ಪ್ರಶಾಂತ್ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸಿದ್ದಾರ್ಥ ಇದ್ದರು.
---