ಜಿಲ್ಲೆ

ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ ಆರಂಭ    ಮೊದಲ ದಿನ 630 ಸ್ಪರ್ಧಾಳು ಭಾಗಿ

ಡಿ. ಎಂ. ಮಹೇಶ್

ದಾವಣಗೆರೆ: ನಗರದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಯೂನೆಕ್ಸ್-ಸನ್‌ರೈಸ್ ಕರ್ನಾಟಕ ರ‌್ಯಾಂಕಿಂಗ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿ ಭಾನುವಾರ ಸಾಂಕೇತಿಕವಾಗಿ ಚಾಲನೆಗೊಂಡಿದೆ.
ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್ ರಾಕೆಟ್ ಬೀಸುವ ಮೂಲಕ ಸಂಸ್ಥೆಯ ಗೌರವಾಧ್ಯಕ್ಷ ಬಿ.ವಿ. ಶ್ರೀನಿವಾಸ ಶಿವಗಂಗಾ ಟೂರ್ನಿಗೆ ಚಾಲನೆ ನೀಡಿದರು.
ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಶಿವರಾಜ್ ಮಾಥುರ್, ಪಂದ್ಯದ ನಿರ್ವಹಣಾಗಾರ್ತಿ ಬೀನಾ, ಮುಖ್ಯ ರೆಫ್ರಿ ವಸಂತ್‌ಕುಮಾರ್, ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಬಸವರಾಜ್, ಕಾರ್ಯದರ್ಶಿ ಡಿ.ಆರ್.ಗಿರಿರಾಜ್, ಜಿಲ್ಲಾ ಗೌರವಾಧ್ಯಕ್ಷ ಮಹೇಶ್ ಆರ್. ಶೆಟ್ಟಿ, ಉಪಾಧ್ಯಕ್ಷ ಶ್ರೀಧರ್, ಎಂ.ಆರ್. ಸ್ವಾಮಿ, ಇಸ್ಮಾಯಿಲ್, ಕೆ.ಎಚ್. ಸಿದ್ದೇಶ್ವರ ಇತರರಿದ್ದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜನೆಯಾಗಿರುವ ಪಂದ್ಯಾವಳಿಗಳಲ್ಲಿ ಬಾಲಕರು, ಬಾಲಕಿಯರ ಸಿಂಗಲ್ಸ್, ಡಬಲ್ಸ್ ಹಾಗೂ ಮಿಕ್ಸಡ್ ಡಬಲ್ಸ್ ವಿಭಾಗಗಳಲ್ಲಿ ನಡೆಯಲಿವೆ.
ನೇತಾಜಿ ಸುಭಾಶ್ಚಂದ್ರ ಬೋಸ್ ಕ್ರೀಡಾಂಗಣದ ಆರು ಅಂಕಣಗಳಲ್ಲಿ ಮೊದಲ ದಿನ ಅರ್ಹತಾ ಸುತ್ತಿನ 140 ಪಂದ್ಯಾಟಗಳು ನಡೆದಿವೆ. ಸೋಮವಾರದಿಂದ ಬಾಲಕಿಯರ ನಡುವಿನ ಒಟ್ಟು 65 ಪಂದ್ಯಾಟಗಳನ್ನು ನಗರದ ಆಫೀಸರ್ಸ್‌ ಕ್ಲಬ್‌ನ ಎರಡು ಅಂಕಣಗಳಲ್ಲಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಸಮಯದ ಉಳಿತಾಯವಾಗಲಿದೆ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಬಸವರಾಜ್ ವಿವರಿಸಿದರು.
ಟೂರ್ನಿಯಲ್ಲಿ ಮೂರೂ ವಿಭಾಗಗಳ ವಿಜೇತ 64 ಜನರಿಗೆ ಒಟ್ಟು 1.92 ಲಕ್ಷ ರೂ. ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಮೂರು ದಿನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಟೂರ್ನಿಯಲ್ಲಿ 1,048 ಬ್ಯಾಡ್ಮಿಂಟನ್ ಪಟುಗಳು ನೋಂದಣಿಯಾಗಿದ್ದು, ಮೊದಲ ದಿನ 630 ಕ್ರೀಡಾಳುಗಳು ಭಾಗವಹಿಸಿದ್ದಾರೆ. ಎಲ್ಲ ಸ್ಪರ್ಧಾಳುಗಳಿಗೆ ಊಟ- ಉಪಹಾರ ವ್ಯವಸ್ಥೆ ಮಾಡಲಾಗಿದೆ. ಮೂವರು ಮುಖ್ಯ ರೆಫ್ರಿ, 15 ತೀರ್ಪುಗಾರರಿಗೆ ವಸತಿ-ಊಟದ ಸೌಕರ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಡಿ.ಆರ್.ಗಿರಿರಾಜ್ ತಿಳಿಸಿದರು.