ಜಿಲ್ಲೆ

ಬೆಂಗಳೂರಿನ ಆರವ್, ನಿಧಿ ಆತ್ಮಾರಾಂಗೆ ಬ್ಯಾಡ್ಮಿಂಟನ್ ಪ್ರಶಸ್ತಿ

ಡಿ. ಎಂ. ಮಹೇಶ್

ದಾವಣಗೆರೆ: ಚಾಕಚಕ್ಯತೆಯ ಆಟದೊಂದಿಗೆ ಮೂರನೇ ಶ್ರೇಯಾಂಕಿತ ಆಟಗಾರ ಬೆಂಗಳೂರಿನ ಆರವ್ ಬಾಸಕ್, ಶನಿವಾರ ಇಲ್ಲಿ ಮುಕ್ತಾಯಗೊಂಡ 17 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ರಾಜ್ಯ ಬ್ಯಾಡ್ಮಿಂಟನ್ ಪ್ರಶಸ್ತಿ ದಕ್ಕಿಸಿಕೊಂಡರು.

ನೇತಾಜಿ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಎದುರಾಳಿ ಚಿಕ್ಕಮಗಳೂರಿನ ಐದನೇ ಶ್ರೇಯಾಂಕಿತ ಆಟಗಾರ ಯಶಸ್ ಎಂ. ರೆಡ್ಡಿ ವಿರುದ್ಧ ಹೋರಾಟ ಮುಂದುವರಿಸಿದ ಆರವ್, 17-21, 21-13, 21-17 ರಿಂದ ಅವರನ್ನು ಮಣಿಸಿದರು.

17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನ ಫೈನಲ್‌ನಲ್ಲಿ, ಬೆಂಗಳೂರಿನ ಎರಡನೇ ಶ್ರೇಯಾಂಕಿತೆ ನಿಧಿ ಆತ್ಮಾರಾಂ ಅವರು 17-21, 21-17, 21-16 ಗೇಮ್‌ಗಳಿಂದ ಒಂದನೇ ಶ್ರೇಯಾಂಕಿತ ಆಟಗಾರ್ತಿ ಎಲ್. ಹಿತಶ್ರೀ ಅವರನ್ನು ಪರಾಭವಗೊಳಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

17 ವರ್ಷದೊಳಗಿನ ಬಾಲಕರ ಡಬಲ್ಸ್‌ನ ಅಂತಿಮ ಪಂದ್ಯದಲ್ಲಿ ಬೆಂಗಳೂರಿನ ಮೆಹುಲ್ ಮಾನವ್ ಅರುಲ್‌ಮುರುಗನ್ ಹಾಗೂ ಸಾತ್ವಿಕ್ ಎಸ್. ಪ್ರಭು ಜೋಡಿಯು ಆರ್.ಗೌರವ್- ಹಾರ್ದಿಕ್ ಕೆ. ಮೊಹಂತಿ ಜೋಡಿಯನ್ನು 21-19, 21-12ರಿಂದ ಸೋಲಿಸಿದರು.

ಇದೇ ವಿಭಾಗದ ಬಾಲಕಿಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಎದುರಾಳಿ ದಿಶಾ ರವಿ ಭಟ್ ಮತ್ತು ತನ್ವಿ ಮುನೋತ್ ಜೋಡಿಯನ್ನು 18-21, 21-17, 21-15 ಗೇಮ್‌ಗಳಿಂದ ಮಣಿಸಿದ ನಿಧಿ ಆತ್ಮಾರಾಂ- ಸೆಲ್ವಸಮುದ್ದಿ ಸೆಲ್ವಪ್ರಭು ತಂಡ ಡಬಲ್ಸ್ ಪ್ರಶಸ್ತಿ ಬಾಚಿತು.

ಮಿಕ್ಸಡ್ ಡಬಲ್ಸ್‌ನಲ್ಲಿ ಬೆಂಗಳೂರಿನ ಚಿರಾಗ್ ಪ್ರಕಾಶ್-ತನ್ವಿ ಮುನೊತ್ ಜೋಡಿಯು ಆರ್. ಗೌರವ್-ಸುಮೇಧ ಶ್ರೀನಿವಾಸ್ ಜೋಡಿಯನ್ನು 23-25, 21-11, 21-16ರಿಂದ ಕಟ್ಟಿ ಹಾಕಿತು.

15 ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್ ಪ್ರಶಸ್ತಿಯನ್ನು ನಾಲ್ಕನೇ ಶ್ರೇಯಾಂಕಿತೆ ಬೆಂಗಳೂರಿನ ಮಹಿತಾ ನಾಯ್ಡು ಸೂರಿಶೆಟ್ಟಿ ಮುಡಿಗೇರಿಸಿಕೊಂಡರು. ಎದುರಾಳಿ ಅತಿಥಿ ಸುಶಾಂತ್ ಅವರನ್ನು 22-20, 21-17ರಿಂದ ಸೋಲಿಸಿದರು.

ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಮೂರನೇ ಶ್ರೇಯಾಂಕಿತ ಆಟಗಾರ ಏಡ್ರಿಯನ್ ಎಡ್ವರ್ಡ್ ಅವರು ಐದನೇ ಶ್ರೇಯಾಂಕಿತ ಈಶ್ವರ್ ಸಾಯಿ ಅವರಿಗೆ 21-16, 21-14ರಲ್ಲಿ ಸೋಲಿನ ರುಚಿ ಉಣಿಸಿದರು.

ಬಾಲಕರ ಡಬಲ್ಸ್‌ನ ಪ್ರಶಸ್ತಿಗಾಗಿ ನಡೆದ ಅಂತಿಮ ಹೋರಾಟದಲ್ಲಿ ಆರ್ಯನ್ ರಾಘವನ್-ಬಿ.ಆರ್. ಚಿರಂತ್‌ರಾಜ್ ಜೋಡಿಯು, ಗೌತಮ್ ಎಸ್. ನಾಯರ್-ಸಿದ್ದಾರ್ಥ ಎಸ್. ನಾಯರ್ ಜೋಡಿಯನ್ನು 21-12, 26-24ರಿಂದ ಸೋಲಿಸಿತು.

ಬಾಲಕಿಯರ ಡಬಲ್ಸ್‌ನ ಫೈನಲ್ ಪಂದ್ಯದಲ್ಲಿ ಏಕಪಕ್ಷೀಯ ಆಟದ ಪ್ರದರ್ಶನ ನೀಡಿದ ಕೀರ್ತಿ ಬಾಲಾಜಿ- ಶ್ರೀಯಾ ಜೋಶಿ ಜೋಡಿಯು ಕಂಡಿಬಿಲ್ಲಾ ಶ್ರೇಯಾ- ಶ್ರೀನಾಗಲಕ್ಷ್ಮಿ ಜೋಡಿಯನ್ನು 21-13, 21-14ರಲ್ಲಿ ಮಣಿಸಿ ಪ್ರಶಸ್ತಿಗೆ ಭಾಜನವಾಯಿತು.

ಮಿಕ್ಸಡ್ ಡಬಲ್ಸ್‌ನ ಅಂತಿಮ ಹಣಾಹಣಿಯಲ್ಲಿ ಏಡ್ರಿಯನ್ ಎಡ್ವರ್ಡ್-ಸುಪ್ರಿಯಾ ದೀಪಕ್ ಜೋಡಿಯು ಲಕ್ಷ್ಶ್ ರಾಘು-ಅವನಿ ಕುಲಕರ್ಣಿ ಜೋಡಿಯನ್ನು 21-17, 21-13ರಲ್ಲಿ ಪರಾಭವಗೊಳಿಸಿತು.

ಸಮಾರೋಪದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಆರ್. ಮನೋಜ್‌ಕುಮಾರ್, ಉಪಾಧ್ಯಕ್ಷರಾದ ಕಿರಣ್ ಬೆಳಗಾವಿ, ಶಿವರಾಜ್ ಮತ್ತೂರು, ಎಸ್.ಎನ್. ಬಸವರಾಜ್, ಬಿಡಿಸಿ ಚೇರ‌್ಮನ್ ಟಿ.ಎಸ್. ವಿಶ್ವಾಸ್, ವಿಜಯನಗರ ಕುಶಾಲ್, ಕೆ. ಅಶೋಕ್. ಗಿರಿರಾಜ್ ಇತರರು ಬಹುಮಾನ ವಿತರಿಸಿದರು.

-----------