ದಾವಣಗೆರೆ: ಇಂದಿನ ದಿನಮಾನದಲ್ಲಿ ವಚನ ಸಾಹಿತ್ಯದ ಮೆಚ್ಚುಗೆ ಜತೆಯಲ್ಲೇ ಅಪಮೌಲ್ಯೀಕರಿಸುವ ಪ್ರಯತ್ನ ನಡೆದಿದೆ ಎಂದು ಧಾರವಾಡದ ವಚನ ಸಾಹಿತ್ಯ ಸಂಶೋಧಕ ಡಾ. ವೀರಣ್ಣ ಬಿ. ರಾಜೂರ ಆತಂಕ ವ್ಯಕ್ತಪಡಿಸಿದರು.
ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಲೋಕವಿರೋಧಿ ಧರ್ಮ, ಸಮಾಜದಲ್ಲಿನ ಸ್ಥಾವರ ವ್ಯವಸ್ಥೆ ತೊಡೆದುಹಾಕಿ ಜಂಗಮ ಸ್ಥಾನ ತಂದ ವಚನಕಾರರು ನಿಜವಾದ ಬಂಡಾಯಗಾರರು. ಆದರೂ ಅವರು ಬಂಡಾಯ ಮಾಡಲಿಲ್ಲ ಎಂಬುದಾಗಿ ಟೀಕಿಸಲಾಗುತ್ತಿದೆ. ಈ ರೀತಿ ಅಪಮೌಲ್ಯ ನಡೆಯದು ಎಂದು ಹೇಳಿದರು.
ವಚನ ಸಾಹಿತ್ಯ ಜಾತಿ-ಮತಗಳಿಗೆ ಸಂಬಂಧಿಸಿದ್ದಲ್ಲ. ಸಮಾಜದ ಸಮಸ್ಯೆಗಳಿಗೆ ವಚನಕಾರರು ಪ್ರತಿಸ್ಪಂದಿಸಿದರು. ವಚನಗಳಲ್ಲಿ ಎಲ್ಲವೂ ಇದೆ. ಅಸ್ಪಶ್ಯರು, ಅಂಗವಿಕಲರು ಸೇರಿ ಎಲ್ಲ ವರ್ಗದವರನ್ನೂ ಅವರು ಸಮಾನವಾಗಿ ಕಂಡರು. ವಚನ ಸಾಹಿತ್ಯಅಧ್ಯಯನ ಮಾಡುವ ರೀತಿಗೆ ಮಸಿ ಬಳಿಯುವ ಕೆಲಸ ಮಾಡಬಾರದು ಎಂದರು.
ವಚನಕಾರರು ತಾವು ಪಡೆದ ಅನುಭವ, ಸತ್ಯವನ್ನು ಸ್ವಾರ್ಥಕ್ಕೆ ಬಳಸದೆ ಸಮಾಜಕ್ಕೆ ತಿಳಿಸಿದರು. ಎಲ್ಲರ ಬದುಕನ್ನು ಎತ್ತರಕ್ಕೆ ಏರಿಸಲು, ಸದೃಢ ರಾಷ್ಟ್ರ ನಿರ್ಮಾಣ ಆಗಬೇಕೆಂದು ಬಯಸಿ ಆ ದಿಸೆಯಲ್ಲಿ ನಡೆದರು. ಹೀಗಾಗಿ ವಚನಗಳಿಗೆ ಸಾವಿಲ್ಲ. ವಚನಕಾರಿಗೆ ಎಂದೂ ಅನ್ಯಾಯ ಆಗುವುದಿಲ್ಲ ಎಂದೂ ಸ್ಪಷ್ಟೀಕರಿಸಿದರು.
2 ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡದಷ್ಟು ಸಮರ್ಥವಾದ ಭಾಷೆ ಮತ್ತೊಂದಿಲ್ಲ. ಎಷ್ಟೇ ದಾಳಿಗೆ ಒಳಗಾದರೂ ಕನ್ನಡದ ಜೀವಂತಿಕೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದೆ. ಇಂಗ್ಲಿಷ್‌ನಲ್ಲಿ ಓದಿದರೆ ನೌಕರಿ ಸಿಗುತ್ತದೆಂಬುದು ಭ್ರಮೆ ಹೋಗಲಾಡಿಸಿ ಪಾಲಕರ ಮನಸ್ಸಿನಲ್ಲಿ ಕನ್ನಡದ ಮೌಲ್ಯ ಪರಿಚಯಿಸಬೇಕು ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ ಡಾ.ಶಿವಕುಮಾರ ಸ್ವಾಮೀಜಿ ಅವರು ಮಾಗನೂರು ಬಸಪ್ಪ ಅವರಿಗೆ ಆರೂಢ ದಾಸೋಹಿ ಎಂಬ ಬಿರುದು ನೀಡಿದ್ದರು. ಸಮಾಜದಲ್ಲಿ ಇಂದು ಆರೂಢ ದಾಸೋಹಿಗಳ ಸಂಖ್ಯೆ ಹೆಚ್ಚಬೇಕಿದೆ ಎಂದು ಆಶಿಸಿದರು.
ಸತ್ಯಶುದ್ಧ ಕಾಯಕದಿಂದ ತನು ಶುದ್ಧೀಕರಣ ಆಗಿದೆ. ದಾಸೋಹ ಪರಿಕಲ್ಪನೆಯಡಿ ನೀಡುವವರ ಅಹಂಕಾರ ತಗ್ಗಲಿದೆ. ಬಸವಣ್ಣನವರು ಹೇಳಿದಂತೆ ತನು, ಮನ ಹಾಗೂ ಭಾವ ಮೂರೂ ಶುದ್ಧವಾಗಿರಬೇಕು.
ಬಸವ ಕಲ್ಯಾಣದಲ್ಲಿ ನಿರ್ಮಾಣ ಆಗುತ್ತಿರುವ ಅನುಭವಮಂಟಪ ಕಾಮಗಾರಿ ಉತ್ತಮವಾಗಿ ಮೂಡಿಬಂದಿದೆ. 770 ಅಮರ ಗಣಂಗಳ ವಚನಗಳ ಸುಂದರ ಕೆತ್ತನೆ ನಡೆಯುತ್ತಿದೆ ಎಂದು ಸ್ಮರಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ್ ಮಾತನಾಡಿ ಬೆಂಗಳೂರಿಗೆ ಕೆಂಪೇಗೌಡರಂತೆಯೇ ಮಾಗನೂರು ಬಸಪ್ಪನವರು ದಾವಣಗೆರೆಯ ನಿರ್ಮಾಪಕರು. 95 ವರ್ಷ ಸಾರ್ಥಕ ಬದುಕು ನಡೆಸಿದರು. ವ್ಯವಹಾರದ ಜತೆಯಲ್ಲೇ ಕಾಯಕವನ್ನೂ ನಿಭಾಯಿಸಿದ್ದರು ಎಂದು ಸ್ಮರಿಸಿದರು.
ಸಮಾಜದಲ್ಲಿ ಮಾನವೀಯ ಗುಣಗಳಿಲ್ಲ. ನಾವಿಂದು ಹಣ, ಅಧಿಕಾರದ ಹಿಂದೆ ಓಡುತ್ತಿದ್ದೇವೆ, ಸಂಸ್ಕಾರ, ಸಂಸ್ಕೃತಿ ಮರೆಯುತ್ತಿದ್ದೇವೆ. ಇಂದಿನ ಸಂದಿಗ್ಧ ಸಂದರ್ಭದಲ್ಲಿ ಶರಣ ಸಾಹಿತ್ಯ ಮಾತ್ರವೇ ಆತ್ಮಸಂತೋಷ ನೀಡಲಿದೆ ಎಂದು ಹೇಳಿದರು.
ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ ಲಿಂಗಾಯತ ಧರ್ಮದ ಆಚರಣೆ ಹಿಂದೆ ವೈಜ್ಞಾನಿಕತೆ ಇದೆ. ವಿಭೂತಿ, ಕುಂಕುಮ, ಲಿಂಗ ಧಾರಣೆ ಎಲ್ಲದರ ಹಿಂದೆಯೂ ಧರ್ಮದ ನಿಯಮಗಳಿವೆ. ಅದನ್ನು ನಾವಿಂದು ಮರೆತಿದ್ದೇವೆ ಎಂದರು. ಯಾವುದೇ ಭಾಷೆ ಕಲಿಯಲು ಅಡ್ಡಿಯಿಲ್ಲ. ಆದರೆ ಮಾತೃಭಾಷೆ ಮರೆಯಬಾರದು ಎಂದು ತಿಳಿಸಿದರು.
ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ ಮಾತನಾಡಿ ಮಾಗನೂರು ಬಸಪ್ಪ ಅವರು ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಗಾಂಧೀಜಿ ಅವರ ಆಶಯದಂತೆ ಜೀವನದುದ್ದಕ್ಕೂ ಖಾದಿ ಧರಿಸಿದ್ದರು. ಯಾರೇ ಸಹಾಯ ಕೇಳಿಬಂದರೂ ನಿರಾಕರಿಸದ ಸ್ಥಿತಿ ಅವರದಾಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರಗೌಡ, ಪತ್ನಿ ಸುನಂದಾ ದೇವಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಮಾಜಿ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಇದ್ದರು.