ಜಿಲ್ಲೆ

ಅಂಕ ತಗ್ಗಿದರೂ ನಡೆ-ನುಡಿ ಕುಗ್ಗದಿರಲಿ    ಸಾಹಿತಿ ನಾಗಲೇಖ ಹೇಳಿಕೆ

ಡಿ. ಎಂ. ಮಹೇಶ್

ದಾವಣಗೆರೆ: ಓದಿನಲ್ಲಿ ಒಂದು ಅಂಕ ಕಡಿಮೆಯಾದರೂ ಪರವಾಗಿಲ್ಲ. ಉತ್ತಮ ನಡೆ-ನುಡಿ, ಗುಣಗಳನ್ನು ಕಳೆದುಕೊಳ್ಳದಿರಿ ಎಂದು ಬೆಂಗಳೂರಿನ ಜನನಿ ಫೌಂಡೇಷನ್‌ನ ಸಂಸ್ಥಾಪಕ, ಸಾಹಿತಿ ನಾಗಲೇಖ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಇಂದು ಗುಣವಂತರ ಕೊರತೆ ಕಾಡುತ್ತಿದೆ. ಹೀಗಾಗಿ ಯಾರನ್ನೂ ನೋಯಿಸದಿರಿ. ಮನುಷ್ಯನಿಗೆ ನೈತಿಕ ಮೌಲ್ಯಗಳು ಮುಖ್ಯ. ಅವು ಇದ್ದಾಗ ಮಾತ್ರ ಬದುಕು ಸಾರ್ಥಕವಾಗಲಿದೆ ಎಂದರು.
ಸಮಾಜಕ್ಕೆ ಕಂಟಕವಾಗುತ್ತಿರುವ ಮೊಬೈಲ್ ಸಂಸ್ಕೃತಿಯನ್ನು ಕೈಬಿಡಿ. ಕನ್ನಡ ಭಾಷೆ ಸರ್ವಶ್ರೇಷ್ಠ ಸಾಹಿತ್ಯ ಭಂಡಾರ ಹೊಂದಿದ್ದು ಇವು ನಮ್ಮ ಬದುಕನ್ನು ಬದಲಾಯಿಸುತ್ತವೆಯೇ ಹೊರತು ಮೊಬೈಲ್‌ಗಳಲ್ಲ. ಹೀಗಾಗಿ ಕನ್ನಡ ಪುಸ್ತಕಗಳನ್ನು ಓದಿ ಎಂದು ಕಿವಿಮಾತು ಹೇಳಿದರು.
ವಿವೇಕಾನಂದರು ಯುವಶಕ್ತಿಯೇ ರಾಷ್ಟ್ರಶಕ್ತಿ ಎಂದರು. ಈ ಶಕ್ತಿ ಇಂದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು ಗಾಬರಿ ಹುಟ್ಟಿಸುತ್ತದೆ. ಎಲ್ಲರೂ ಸಹ ಶರಣ ಸಂಸ್ಕೃತಿ, ಶರಣ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ದಿ. ಶಿವಕುಮಾರ ಸ್ವಾಮೀಜಿ, ದಿ.ಸಿದ್ದೇಶ್ವರ ಶ್ರೀ , ಗದಗಿನ ದಿ.ಪುಟ್ಟರಾಜ ಗವಾಯಿಗಳು ನಮ್ಮ ಆದರ್ಶಪುರುಷರಾಗಬೇಕು ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಮರುಮೌಲ್ಯಮಾಪನ ಮಾಡಿಸಬಹುದು. ಪಾಲಕರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಿ. ಬಡತನ ಶಿಕ್ಷಣಕ್ಕೆ ಅಡ್ಡಿಯಾಗದು. ಉತ್ತಮ ಶಿಕ್ಷಣದೊಂದಿಗೆ  ಶಿಕ್ಷಕರು, ಪಾಲಕರಿಗೆ ಕೃತಜ್ಞರಾಗಿ ಎಂದು ತಿಳಿಸಿದರು.
ಕಲಾಕುಂಚ ಸಂಸ್ಥೆ ಅಧ್ಯಕ್ಷ ಕೆ.ಎಚ್.ಮಂಜುನಾಥ, ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ ಶೆಣೈ, ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಕೇರಳ ಗಡಿನಾಡ ಶಾಖೆ ಅಧ್ಯಕ್ಷೆ ಜಯಲಕ್ಷ್ಮಿ, ರಾಮಚಂದ್ರ ಹೊಳ್ಳ, ವಸಂತಿ ಮಂಜುನಾಥ, ಶೈಕ್ಷಣಿಕ ಸಾಧಕಿ ಟಿ.ಎಸ್. ಭಾವನಾ ಇದ್ದರು.