ದಾವಣಗೆರೆ: ಆಗಸ್ಟ್ 8ರೊಳಗೆ ಸರ್ಕಾರದ ಜತೆ ನಡೆಯಲಿರುವ ಅಂತಿಮ ಸಭೆಯಲ್ಲಿ ಕಾರ್ಯಕರ್ತೆಯರಿಗೆ 12 ಸಾವಿರ ರೂ. ಪ್ರೋತ್ಸಾಹಧನ ನಿರ್ಣಯದ ಸಿಹಿಸುದ್ದಿ ಬರಲಿದೆ ಎಂದು ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹೇಳಿದರು.
ಎಐಯುಟಿಯುಸಿ ನೇತೃತ್ವದಲ್ಲಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಘಟಕದಿಂದ ಇಲ್ಲಿನ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ, ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯಡಿ ವಿವಿಧ ಸೇವೆ, ಸರ್ಕಾರದ ನಾನಾ ಸರ್ವೇ, ಶಾಲಾ-ಕಾಲೇಜು ಪರೀಕ್ಷೆ, ಮತದಾನ ದಿನಗಳಂದು ಬಳಸಿಕೊಳ್ಳುವ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಪ್ರೋತ್ಸಾಹಧನ ನೀಡಿದರೆ ಸರ್ಕಾರಕ್ಕೆ ಹೊರೆಯಾಗದು. ಅಲ್ಲದೆ ಆರ್‌ಸಿಎಚ್ ಪೋರ್ಟಲ್ ರದ್ದುಪಡಿಸಲೂ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಸರ್ಕಾರ ಒಪ್ಪಿದರೆ 12 ಸಾವಿರ ರೂ. ಪ್ರೋತ್ಸಾಹಧನ ನೀಡಲು ಸಿದ್ಧರಿರುವುದಾಗಿ ಆರೋಗ್ಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಇದು ಈಡೇರದಿದ್ದರೆ ಮತ್ತೆ ಹೋರಾಟಕ್ಕೆ ದುಮುಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಾವು ದುಡಿದ ದುಡ್ಡು ನಮ್ಮ ಕೈಗೆ ಸರಿಯಾಗಿ ಸಿಗುತ್ತಿಲ್ಲ. ಹಲವಾರು ಕಾರಣಕ್ಕೆ ಮಾಹಿತಿ ಇಲ್ಲದಲೇ ನಮ್ಮ ಹಣ ಕಟಾವಣೆ ಆಗುತ್ತಿದೆ. ಶೋಷಣೆಯಲ್ಲಿದ್ದೇವೆ ಎಂಬುದು ಸರ್ಕಾರದ ಗಮನಕ್ಕಿದೆ. ಗ್ಯಾರಂಟಿ ಯೋಜನೆಯ ಸಮೀಕ್ಷೆ ಹಣವನ್ನು ಮುಂದಿನ ಬಜೆಟ್‌ನಲ್ಲಿ ನೀಡುವುದಾಗಿ ಸರ್ಕಾರ ಹೇಳಿದೆ.
ಅಧಿಕಾರಿಗಳು ಮತ್ತು ಸಂಘಟನೆಯವರು ಒಳಗೊಂಡ ಸಮಿತಿ 5 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದಾಗ ಎಲ್ಲೆಡೆ ಆರ್‌ಸಿಎಚ್ ಪೋರ್ಟಲ್ ಕೈಬಿಡುವಂತೆ ಒತ್ತಡ ಬಂದಿದೆ. ಪ್ರಾದೇಶಿಕ ಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ಇದು ಸಾಧ್ಯವಾಗಿದೆ ಎಂದು ಸರ್ಕಾರ ಹೇಳುತ್ತಿತ್ತು. ಇದೀಗ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಸಿದ್ದರಾಮಯ್ಯ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕರೊನಾ ಕಾಲದಲ್ಲಿ ಆಶಾಗಳ ಕಾರ್ಯಕ್ಕೆ ವಿಶ್ವ ಮನ್ನಣೆ ಸಿಕ್ಕಿತು. ಕರೊನಾ ಕಾಲದಲ್ಲಿ ಪರೀಕ್ಷೆ ವೇಳೆ ನಮ್ಮನ್ನು ಬಳಸಿಕೊಂಡಿದ್ದು ಸರಿ. ಈಗಲೂ ಶಾಲಾ ಕಾಲೇಜುಗಳ ಪರೀಕ್ಷೆಗಳಿಗೆ ಬಳಸುವುದು ಎಷ್ಟು ಸರಿ? ಚುನಾವಣೆ ಕಾರ್ಯಕ್ಕೆ ಬಳಸಿಕೊಂಡರೂ ಭತ್ಯೆ ನೀಡಲಾಗಿಲ್ಲ. ನಮ್ಮದೇ ಹಣ ವೆಚ್ಚ ಮಾಡಿಕೊಂಡು ಹೋಗಿದ್ದೇವೆ ಎಂದೂ ಬೇಸರ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೆ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕು. ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬಜೆಟ್ ಮೀಸಲಿಡಬೇಕು ಎಂದು ಆಗ್ರಹಿಸಿದ ಅವರು, ಸೆ. 14, 15ರಂದು ಕಲಬುರಗಿಯಲ್ಲಿ ರಾಜ್ಯ ಸಮ್ಮೇಳನ ನಡೆಯಲಿದ್ದು ಎಲ್ಲರೂ ಭಾಗವಹಿಸಿ. ಆಶಾ ಸಂಘಟನೆ ಮತ್ತಷ್ಟು ಬಲವರ್ಧನೆಗೊಳಿಸಿ ಎಂದು ಮನವಿ ಮಾಡಿದರು.
ಸಿಎಚ್‌ಒ ನೌಕರರ ಸಂಘದ ಜಿಲ್ಲಾಧ್ಯಕ್ಷ ವಸಂತ್‌ಕುಮಾರ್ ಮಾತನಾಡಿ ಆಶಾ ಕಾರ್ಯಕರ್ತೆಯರ ಶ್ರಮದಿಂದಾಗಿ ನನಗೆ ಉತ್ತಮ ಸಮುದಾಯ ಆರೋಗ್ಯಾಧಿಕಾರಿ ಎಂಬ ಪ್ರಶಸ್ತಿ ಬಂದಿದೆ. ಆಶಾಗಳ ಸಮಸ್ಯೆಗಳಿಗೆ ನಮ್ಮ ಸಂಘ ಸ್ಪಂದಿಸಲಿದೆ. ನಮ್ಮ ಸಂಘದ ಚಟುವಟಿಕೆಗಳಲ್ಲಿ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆನರಾಬ್ಯಾಂಕ್ ಸ್ಟಾಫ್ ಫೆಡರೇಷನ್‌ನ ಮಾಜಿ ಜಿಲ್ಲಾಧ್ಯಕ್ಷ ಹಿರೇಮಠ್, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ತಾಲೂಕು ಸಮಿತಿಗಳ ಮುಖಂಡರಾದ ಲಲಿತಮ್ಮ, ಲೀಲಾವತಿ, ಸುಮಾ, ಲಕ್ಷಿದೇವಿ, ಕರಿಬಸಮ್ಮ, ಪರ್ವಿನ್‌ಬಾನು ಇತರರಿದ್ದರು.