ಜಿಲ್ಲೆ

ದೃಶ್ಯಕಲಾ ಕಾಲೇಜಿನ ಖ್ಯಾತಿ ಹಿಗ್ಗಿಸಿ

ಡಿ. ಎಂ. ಮಹೇಶ್

ದಾವಣಗೆರೆ: ವರ್ಷಕ್ಕೆ 2-3 ದತ್ತಿ ಉಪನ್ಯಾಸ, ಕಾರ್ಯಾಗಾರಗಳ ಮೂಲಕ ದಾವಣಗೆರೆಯ ದೃಶ್ಯಕಲಾ ಕಾಲೇಜನ್ನು ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವಂತೆ ಕಾಲೇಜಿನ ಬೋಧಕ ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು ಎಂದು ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.

ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಕಾಲೇಜಿನಲ್ಲಿ ಬಿದರೆ ನಾರಾಯಣರಾವ್ ದತ್ತಿನಿಧಿ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ, ಕಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮೂವರು ಹಿರಿಯ ಕಲಾವಿದರು ದತ್ತಿ ಉಪನ್ಯಾಸಕ್ಕೆ ನೆರವು ನೀಡಿದ್ದಾರೆ. ಕಲಾವಿದರನ್ನು ಕರೆಸಿ ಉತ್ತಮ ಶೈಕ್ಷಣಿಕ ಪೂರಕ ಉಪನ್ಯಾಸ ಕೊಡಿಸಬೇಕು. ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಚಿನ್ನದ ಪದಕಗಳನ್ನು ಕೊಡಿಸಿದಲ್ಲಿ ಕಲಾ ಶಿಕ್ಷಣದ ಬಗ್ಗೆ ಇತರರಲ್ಲೂ ಉತ್ತೇಜನ ಸಿಗಲಿದೆ. ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಚಿನ್ನದ ಪದಕದ ದೇಣಿಗೆ ಪಡೆಯಲು ಮುಂದಾಗಬೇಕು ಎಂದು ಹೇಳಿದರು.

ದೃಶ್ಯಕಲಾ ಕಾಲೇಜು ಕಳೆದ 59 ವರ್ಷದಲ್ಲಿ ನಾನಾ ಕಾರಣಗಳಿಂದಾಗಿ ಅದೃಶ್ಯವಾಗಿತ್ತು. ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ವರ್ಷವಿಡೀ ಕಾರ್ಯಕ್ರಮ ನಡೆಸಿ ಕಳೆದುಕೊಂಡಿದ್ದ ಹೆಸರನ್ನು ಕಾಲೇಜು ಪುನಃ ಪಡೆದುಕೊಳ್ಳುತ್ತಿದೆ. ಇದರ ಮೊದಲ ಪ್ರತಿಫಲಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

ಬಹುತೇಕರಲ್ಲಿ ಕಲೆಯ ಬಗ್ಗೆ ಅಭಿರುಚಿ ಇರುತ್ತದೆ. ನಿಜವಾದ ಸಂತೋಷ, ಉತ್ಸಾಹವು ಚಿತ್ರಕಲೆ ಮತ್ತು ಸಂಗೀತದಿಂದ ಮಾತ್ರವೇ ಸಿಗಲಿದೆ. ಕಲಾ ಮಾಧ್ಯಮದಿಂದ ನೌಕರಿ ಸಿಗುವುದಿಲ್ಲ ಎಂಬ ಮನೋಭಾವದಿಂದ ಮಕ್ಕಳಿಗೆ ಕಲಾ ಶಿಕ್ಷಣ ನೀಡಲು ಪಾಲಕರು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಿದ್ದೇವೆ. ದಿನದ ಕನಿಷ್ಠ 14 ತಾಸು ಥಿಯರಿ ಜತೆಗೆ ಪ್ರಾಯೋಗಿಕ ಕಲಿಕೆಯಲ್ಲಿ ತೊಡಗಿಕೊಂಡಲ್ಲಿ ನೀವೂ ಸಹ ಖ್ಯಾತ ಕಲಾವಿದರು ಆಗಬಹುದು ಎಂದರು.

ಬೆಂಗಳೂರಿನ ಹಿರಿಯ ಕಲಾವಿದ ಎ.ಎಂ.ಪ್ರಕಾಶ್ ಮಾತನಾಡಿ ಕಾಲೇಜು ಎಂದರೆ ಕೇವಲ ಗೋಡೆ, ಕಟ್ಟಡವಲ್ಲ. ಇಲ್ಲಿನ ವಿದ್ಯಾರ್ಥಿಗಳು ಕಾಲೇಜು, ವಿವಿಯಿಂದ ಪಡೆದುಕೊಂಡದ್ದನ್ನು ಜ್ಞಾನಾರ್ಜನೆಯನ್ನು ಮರಳಿಸುತ್ತಿದ್ದಾರೆ. ಕಾಲೇಜಿಗೆ ನೆರವು ನೀಡುತ್ತಿದ್ದಾರೆ. ಹೀಗಾಗಿ ಈ ದೃಶ್ಯಕಲಾ ಕಾಲೇಜಿನಲ್ಲಿ ಧನಾತ್ಮಕ ಶಕ್ತಿ ಇದೆ. ಈ ಕೊಡು-ಕೊಳ್ಳುವಿಕೆ ನಿರಂತರವಾಗಿ ಇರಬೇಕು ಎಂದು ಆಶಿಸಿದರು.

ಕಲಾ ವಿಮರ್ಶಕ ಕಿರಣ್ ಬಗಾಡೆ ಮಾತನಾಡಿ ಕಲೆ ಎಂಬುದು ಸಾರ್ವತ್ರಿಕ ಭಾಷೆಯಾಗಿದೆ. ದಾವಣಗೆರೆಯ ದೃಶ್ಯಕಲಾ ಕಾಲೇಜು ಸಾಂಸ್ಕೃತಿಕ ಸಮಾನತೆ ತಳಪಾಯದ ಕ್ರಮಬದ್ಧ ವಿಧಾನಗಳ ಮೂಲಕವಾಗಿ ವಿದ್ಯಾರ್ಥಿಗಳಿಗೆ ಸಂವೇದನಾಶೀಲತೆ ಕಲಿಸುತ್ತಿದೆ. ಕಲಾ ವಿದ್ಯಾರ್ಥಿಗಳು ಇತಿಹಾಸ ಮತ್ತು ರಾಜ್ಯಶಾಸ್ತ್ರದ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಕಲಾವಿದ ಶ್ರೀನಾಥ ಬಿದರೆ ಮಾತನಾಡಿ ನನ್ನ ತಂದೆ ಬಿದರೆ ನಾರಾಯಣರಾವ್ ಅವರ ಆಸೆಯಂತೆ ನಾನು ಚಿತ್ರಕಲಾ ಮಾಧ್ಯಮದಲ್ಲಿ ಓದಿದೆ. ನನಗೆ ರಾಷ್ಟ್ರೀಯ ಮಟ್ಟದ ಹೆಸರು ಬಂದಿದ್ದರೆ ನನ್ನ ತಂದೆ ಹಾಗೂ ಓದು ಕಲಿಸಿದ ಈ ಕಾಲೇಜು ಕಾರಣ. ಹೀಗಾಗಿ ಈ ಕಾಲೇಜಿಗೆ ತಂದೆ ಹೆಸರಲ್ಲಿ ದತ್ತಿ ಉಪನ್ಯಾಸಕ್ಕೆ ದೇಣಿಗೆ ನೀಡಿದ್ದೇನೆ ಎಂದು ಹೇಳಿಕೊಂಡರು.

ಪೇಂಟಿಂಗ್ ವಿಭಾಗದಲ್ಲಿ ಐಶ್ವರ್ಯಾ ಎಸ್. ಈಳಿಗೇರ್, ಅಪ್ಲೈಡ್ ಆರ್ಟ್ಸ್ ವಿಭಾಗದಲ್ಲಿ ಆರ್. ನವ್ಯಾ ಆಚಾರ್ ಹಾಗೂ ಆ್ಯನಿಮೇಷನ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಕೀರ್ತಿ ನಾಗೇಂದ್ರ ಸಂಗೂರ್ ಅವರಿಗೆ ಬಿದರೆ ನಾರಾಯಣರಾವ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ. ಸತೀಶ್‌ಕುಮಾರ್ ಪಿ. ವಲ್ಲೇಪುರೆ, ಸಹಾಯಕ ಪ್ರಾಧ್ಯಾಪಕ ಡಾ. ಜೈರಾಜ ಎಂ. ಚಿಕ್ಕಪಾಟೀಲ, ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ಟ ಇದ್ದರು.

----