ದಾವಣಗೆರೆ: ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಲ್ಲಿ ಕಲಾಭಿರುಚಿ ಮೂಡಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಅರವತ್ತು ವರ್ಷಗಳ ಕಲಾ ಪಯಣ, ಅನ್ವೇಷಣೆಯ ಪಥದಲ್ಲಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಿರಂತರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಶಾಲಾ ಮಕ್ಕಳನ್ನು ಕರೆತಂದು ವೀಕ್ಷಿಸಬೇಕು. ಇದರಿಂದ ಮಕ್ಕಳಲ್ಲಿ ಉತ್ತಮ ಕಲಾವಿದರಾಗಬೇಕು ಎಂಬ ಹಂಬಲ ಮೂಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ವಜ್ರಮಹೋತ್ಸವ ನೆನಪಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸಬೇಕು. ಇಲ್ಲಿ ಕಲಿತ ಹೆಸರಾಂತ ಕಲಾವಿದರನ್ನು ಕಾಲೇಜಿಗೆ ಆಹ್ವಾನಿಸಬೇಕು. ಇದಕ್ಕೆ ವಿಶ್ವವಿದ್ಯಾಲಯ ಅಗತ್ಯ ಸಹಕಾರ ನೀಡಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನನ್ನೇ ತಾನು ಮರೆತು ಹೋಗುತ್ತಿರುವ ಸಂದರ್ಭದಲ್ಲಿ ಹಿರಿಯ ಚಿತ್ರಕಲಾವಿದ ಶ್ರೀನಾಥ್ ಬಿದರೆ ಅವರು, ತಮ್ಮ ತಂದೆ ಹೆಸರಿನಲ್ಲಿ ‘ಶ್ರೇಷ್ಠ ಕಲಾ ಪ್ರಶಸ್ತಿ’ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲು ಇಲಾಖೆ ಸಹಕಾರ ನೀಡಲಿದೆ ಎಂದರು.
ಹಿರಿಯ ಕಲಾವಿದ ಎ.ಮಹಾಲಿಂಗಪ್ಪ ಮಾತನಾಡಿ, ಕಲಾ ಶಾಲೆಯ ಚಟುವಟಿಕೆಗಳನ್ನು ಸಾರ್ವಜನಿಕರು ವೀಕ್ಷಿಸಬೇಕು. ನಗರದ ವಿವಿಧೆಡೆ ಕಲಾ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಲಲಿತ ಕಲಾ ಅಕಾಡೆಮಿಯ ಆಶಾರಾಣಿ ನಡೋಣಿ, ಮೈಸೂರು ಕಲಾನಿಕೇತನ ಕಲಾ ಶಾಲೆಯ ಡಾ. ವಿಠ್ಠಲ ರೆಡ್ಡಿ ಎಫ್. ಚುಳಕಿ, ಕಲಾವಿದರಾದ ಪಿ. ಅಬೂಬಕರ್, ಡಿ. ಕುಬೇರಪ್ಪ ಇತರರು ಇದ್ದರು. ಹಿರಿಯ ಕಲಾವಿದ ಶ್ರೀನಾಥ್ ಸ್ವಾಗತಿಸಿದರು.