ಜಿಲ್ಲೆ

ಕೆಲಸ ಅರಸಿ ಬರುವಂತೆ ಕಲೆ ಪ್ರದರ್ಶಿಸಿ   ಭಿತ್ತಿಚಿತ್ರ ಶಿಬಿರದಲ್ಲಿ   ದಾವಿವಿ ಕುಲಪತಿ ಕುಂಬಾರ ಹೇಳಿಕೆ

ಡಿ. ಎಂ. ಮಹೇಶ್

ದಾವಣಗೆರೆ: ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳ ಕೌಶಲ ದಾವಣಗೆರೆ ಸುತ್ತಮುತ್ತಲ ಜನರಿಗೆ ಪರಿಚಯವಾಗುವಂತೆ ಚಿತ್ರ ಪ್ರದರ್ಶನ ಮಾಡಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.
ನಗರದ ದೃಶ್ಯಕಲಾ ಕಾಲೇಜಿನ ಆವರಣದಲ್ಲಿ ಸೋಮವಾರ, ‘ನನಗಲ್ಲ ನಿನಗೆ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಏಳು ದಿನಗಳ ಭಿತ್ತಿಚಿತ್ರ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾವಣಗೆರೆ ನಗರ ಹಾಗೂ ನೆರೆಹೊರೆಯ ಜನರು ಬಂದು ನೋಡುವುದಲ್ಲದೆ, ಶಾಲಾ -ಕಾಲೇಜುಗಳು, ಇತರೆ ಸಂಸ್ಥೆಯವರು ತಮ್ಮಲ್ಲಿಗೆ ಕರೆಸಿ ಚಿತ್ರಗಳನ್ನು ಬರೆಸುವ ಅವಕಾಶ ಕಲ್ಪಿಸುವಂತೆ ಪ್ರದರ್ಶನ ಮಾಡಬೇಕು ಎಂದರು.
ದೃಶ್ಯಕಲಾ ಕಾಲೇಜು ಆವರಣ ಕೆಲವರಿಗೆ ಮೂತ್ರಾಲಯವಾಗಿದೆ. ಇದನ್ನು ತಪ್ಪಿಸಲು, ದಂಡ ವಿಧಿಸುವ ಸಂಬಂಧ ಗೋಡೆ ಚಿತ್ರಗಳಲ್ಲಿ ಜಾಗೃತಿ ಬರಹಗಳನ್ನೂ ಬರೆಯಬೇಕು ಎಂದು ಹೇಳಿದರು.
ಗೋಡೆ ಮೇಲೆ ಚಿತ್ರ ಬರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ದಾವಣಗೆರೆ ವಿವಿ ಕುಲಸಚಿವ ಡಾ. ಯು. ಎಸ್. ಮಹಾಬಲೇಶ್ವರ ಮಾತನಾಡಿ ಕಲೆ ಇಲ್ಲದ ಜೀವನವಿಲ್ಲ. ಇಂದಿನ ಪೀಳಿಗೆಗೆ ಕಲೆ ಕಲಿಸಬೇಕು. ರವಿಮರ್ಮ, ಎಂ.ಎಫ್‌ಹುಸೇನ್ ಮೊದಲಾದ ಖ್ಯಾತನಾಮ ಕಲಾವಿದರಂತೆ ಉತ್ತಂಗಕ್ಕೇರುವ ವಿದ್ಯಾರ್ಥಿಗಳು ಈ ಕಾಲೇಜಿನಿಂದ ಹೊರಬರಲಿ ಎಂದು ಆಶಿಸಿದರು.
ದಾವಣಗೆರೆ ವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಅಶೋಕ್‌ಕುಮಾರ ವಿ. ಪಾಳೇದ ಮಾತನಾಡಿ ಶ್ರಮದಾನ, ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಎನ್ನೆಸ್ಸೆಸ್ ಶಿಬಿರಗಳಿಗೆ ಕಳೆದ ವರ್ಷದಿಂದ ಕಲಾ ರೂಪ ನೀಡಲಾಗುತ್ತಿದೆ. ಕಾಲೇಜಿನ ಅಸ್ಮಿತೆ ಉಳಿಸುವ ಕಾರ್ಯ ಇದಾಗಿದೆ ಎಂದರು.
 ಕಾಲೇಜಿನ ಆವರಣದ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುವ ಮೂಲಕ ವಿದ್ಯಾರ್ಥಿಗಳ ಕಲಾವಂತಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಎನ್ನೆಸ್ಸೆಸ್ ಯೋಜನೆಗೆ ನೀಡುವ ಅನುದಾನವನ್ನೇ ಬಣ್ಣ ಇತರೆ ವೆಚ್ಚಕ್ಕೆ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.
ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಎ.ಮಹಲಿಂಗಪ್ಪ ಮಾತನಾಡಿ ನಗರಪಾಲಿಕೆ ಇತರೆ ಸಾರ್ವಜನಿಕ ಸಂಸ್ಥೆಗಳು ಟೆಂಡರ್ ಮೂಲಕವಾಗಿ ನೀಡುವ ಚಿತ್ರಕಲಾ ರಚನೆಗೆ ಕೆಲಸಗಳನ್ನು ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನುಬದ್ಧವಾಗಿ ನೀಡುವಂತಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ. ಸತೀಶ್‌ಕುಮಾರ ಪಂಚಪ್ಪ ವಲ್ಲೇಪುರೆ, ದತ್ತಾತ್ರೇಯ ಎನ್. ಭಟ್, ಎಂ.ಕೆ. ಗಿರೀಶ್‌ಕುಮಾರ್, ಸಂತೋಷ್‌ಕುಮಾರ್ ಕುಲಕರ್ಣಿ, ಕೆ.ವಿ ಪ್ರಮೋದ್, ಎಸ್.ಎಚ್. ಹರೀಶ್, ಡಿ.ಎಚ್. ಸುರೇಶ್ ಇತರರಿದ್ದರು.