ಜಿಲ್ಲೆ

ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ ಜಿಲ್ಲಾಧಿಕಾರಿಗೆ ರೈತರ ಮನವಿ

ಡಿ. ಎಂ. ಮಹೇಶ್

ದಾವಣಗೆರೆ: ಜಿಲ್ಲೆಯ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತದ ಕೊಯ್ಲು ಶುರುವಾಗಿದ್ದು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಆಗ್ರಹಿಸಿ ಜಿಲ್ಲೆಯ ರೈತರ ಒಕ್ಕೂಟ ಶುಕ್ರವಾರ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಕಳೆದ ಬೇಸಿಗೆಯಲ್ಲಿ ಬರ ಕಾರಣಕ್ಕೆ ಜಮೀನುಗಳನ್ನು ಬೀಳು ಬಿಟ್ಟಿದ್ದ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಈ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ಭದ್ರಾ ಡ್ಯಾಂ ತುಂಬಿದ್ದರಿಂದ ಜಿಲ್ಲೆಯಲ್ಲಿ 4.5 ಲಕ್ಷ ಮೆಟ್ರಿಕ್ ಟನ್ ಭತ್ತ ಇಳುವರಿ ನಿರೀಕ್ಷೆ ಇದೆ. ಆದರೆ, ಖರೀದಿದಾರರ ಒಳಸಂಚಿನಿಂದ ಮಾರುಕಟ್ಟೆಯಲ್ಲಿ ಕ್ವಿಂ.ಒಂದಕ್ಕೆ 2500 ರಿಂದ 2650 ರೂ. ಧಾರಣೆ ನಡೆದಿದೆ. ಹೀಗಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಒಂದಕ್ಕೆ 2320 ದರ ನಿಗದಿ ಪಡಿಸಿದೆ. ಇದಕ್ಕೆ ರಾಜ್ಯ ಸರ್ಕಾರ 600 ಊ.ಗಳ ಪ್ರೋತ್ಸಾಹಧನ ಸೇರಿಸಿ ಕ್ವಿಂ. ಒಂದಕ್ಕೆ 2920 ರೂ.ರಂತೆ ಭತ್ತ ಖರೀದಿಸಬೇಕು. ಡಿ.ವಿ.ಸದಾನಂದಗೌಡ ಅವರು ಸಿಎಂ ಆಗಿದ್ದಾಗ 200 ರೂ.ಗಳ ಪ್ರೋತ್ಸಾಹಧನ ನೀಡಿ ಖರೀದಿಸುವುದಾಗಿ ಘೋಷಿಸಿದ್ದರು. ಕಾಂಗ್ರೆಸ್ ಸರ್ಕಾರ 600 ರೂ. ಪ್ರೋತ್ಸಾಹಧನ ನೀಡಲಿ ಎಂದು ಒತ್ತಾಯಿಸಿದರು.
ರೈತನ ಹೊಲದಿಂದ ಖರೀದಿ ಕೇಂದ್ರಕ್ಕೆ ಹಾಗೂ ಗೋದಾಮಿಗೆ ಸರ್ಕಾರವೇ ಸಾಗಾಣಿಕೆ ಮಾಡಬೇಕು. ಇದಕ್ಕಿಟ್ಟ ದುಡ್ಡು ದುರುಪಯೋಗ ಆಗಬಾರದು. ಎಪಿಎಂಸಿಯಲ್ಲಿ ಪ್ರತಿ ಧಾನ್ಯ ರಾಶಿಗೆ ಟೆಂಡರ್ ಮೂಲಕ ವಹಿವಾಟು ಮಾಡುವ ನಿಯಮವಿದ್ದರೂ ಗಾಳಿಗೆ ತೂರಲಾಗಿದೆ. ಖರೀದುದಾರರು ಧಾರಣೆ ನಿಯಂತ್ರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ನ್ಯಾಯಯುತ ಖರೀದಿಗೆ ಕ್ರಮ ಕೈಗೊಳ್ಳಬೇಕು.
ಎಪಿಎಂಸಿಯಲ್ಲಿ ದಲಾಲಿ ಪಡೆಯುವುದು, ತೂಕದಲ್ಲಿ ವಂಚನೆ, ತಳಗಾಲು ಪಡೆಯುವುದು ಸೇರಿ ನಾನಾ ರೀತಿಯಲ್ಲಿ ರೈತರನ್ನು ಶೋಷಿಸಲಾಗುತ್ತಿದೆ. ಇದನ್ನು ತಡೆದು ರೈತರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಮನವಿಗೆ ಸ್ಪಂದಿಸಿದ ಡಿಸಿ ಗಂಗಾಧರಸ್ವಾಮಿ, ಟಾಸ್ಕ್‌ಫೋರ್ಸ್ ಸಮಿತಿ ಸಭೆ ಕರೆದು ಭತ್ತ ಖರೀದಿ ಪ್ರಕ್ರಿಯೆ ನಡೆಸಲಾಗುವುದು. ಎಪಿಎಂಸಿಯಲ್ಲಿ ಟೆಂಡರ್ ವಹಿವಾಟಿಗೆ  ಬಿಗಿ ಕ್ರಮ ಕೈಗೊಳ್ಳಲಾಗುವುದು. ದಲಾಲಿ, ತೂಕದಲ್ಲಿ ವಂಚನೆ, ತಳಗಾಲು ಪಡೆಯುವುದು ನಿಯಮಬಾಹಿರ. ಇವುಗಳನ್ನು ನಿಯಂತ್ರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ರೈತ ಒಕ್ಕೂಟದ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಗಣೇಶಪ್ಪ, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಪಾಲಿಕೆ ಮಾಜಿ ಸದಸ್ಯ ಎಚ್.ಎನ್. ಶಿವಕುಮಾರ್,  ಆರನೇ ಕಲ್ಲು ವಿಜಯಕುಮಾರ್, ಕಬ್ಬೂರು ಶಿವಕುಮಾರ, ಕುಂದುವಾಡದ ಪುನೀತ್, ಮಹೇಶಪ್ಪ, ಜಿಮ್ಮಿ ಹನುಮಂತಪ್ಪ ಇದ್ದರು.