ದಾವಣಗೆರೆ: ರಾಷ್ಟ್ರೀಕೃತ ಬ್ಯಾಂಕುಗಳು ದೇಶದ ಆಸ್ತಿ. ಅದನ್ನು ಇನ್ನಷ್ಟು ಬಲಗೊಳಿಸಲು ಸರ್ಕಾರ ಗಮನಹರಿಸಬೇಕೇ ಹೊರತಾಗಿ ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ, ನಗರದ ನರಸರಾಜ ರಸ್ತೆಯಲ್ಲಿನ ಸಂಘದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ಯಾಂಕ್ ರಾಷ್ಟ್ರೀಕರಣದ 55 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಬಜೆಟ್ ಅಧಿವೇಶನದಲ್ಲಿ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಕೈಹಾಕುವ ಸಾಧ್ಯತೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಿದರೆ ಅದೊಂದು ರಾಷ್ಟ್ರೀಯ ದುರಂತಕ್ಕೆ ಕಾರಣವಾಗಲಿದೆ ಎಂದರು.
2023-24 ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು 1.41 ಲಕ್ಷ ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರವು ಖಾಸಗೀಕರಣಕ್ಕೆ ಮುಂದಾದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಜನಸಾಮಾನ್ಯರ 180 ಲಕ್ಷ ಕೋಟಿಗೂ ಹೆಚ್ಚಿನ ಠೇವಣಿ ಹಣದ ಸುರಕ್ಷತೆಗೆ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಸುದೀರ್ಘ ಹೋರಾಟದಿಂದಾಗಿ 1969 ರ ಜುಲೈ 19 ರಂದು ಜಾರಿಗೆ ಬಂದ ಬ್ಯಾಂಕ್ ರಾಷ್ಟ್ರೀಕರಣವು ಜನತೆಗೆ ಆರ್ಥಿಕ ಸ್ವಾತಂತ್ರ್ಯ ನೀಡಿದ ಭಾರತದ ಬಹುದೊಡ್ಡ ಆರ್ಥಿಕ ಕ್ರಾಂತಿಯಾಗಿದೆ. ಈ ದಿನವನ್ನು ಬ್ಯಾಂಕ್ ಉದ್ಯೋಗಿಗಳಲ್ಲದೆ ದೇಶದ ಜನತೆ ಆಚರಿಸಬೇಕು ಎಂದು ಹೇಳಿದರು.
ದಿ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಖಾಸಗಿ ವಲಯದ ಒಡೆತನದಲ್ಲಿದ್ದ 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ, ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದರು. 1980ರ ಏ.15 ರಂದು ಮತ್ತೆ 6 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆ ಸೇರಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಇದು ಗಮನಾರ್ಹ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಅಜಿತ್‌ಕುಮಾರ್ ನ್ಯಾಮತಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕವೇ ಸರ್ಕಾರದ ಅನೇಕ ಯೋಜನೆಗಳು ಜನರನ್ನು ತಲುಪುತ್ತಿವೆ. ಖಾಸಗಿ ಬ್ಯಾಂಕುಗಳು ತಮ್ಮ ಲಾಭಕ್ಕಾಗಿ ಕಾರ್ಯ ನಿರ್ವಹಿಸುತ್ತವೆಯೇ ಸೇವಾ ಮನೋಭಾವದಿಂದಲ್ಲ ಎಂದರು.
ಸಂಘದ ಕಾರ್ಯದರ್ಶಿ ಎಚ್.ಎಸ್. ತಿಪ್ಪೇಸ್ವಾಮಿ ಮಾತನಾಡಿ ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕಾಗಿ ಬಳಕೆಯಾಗಬೇಕೇ ವಿನಹ ಖಾಸಗಿ ಕಂಪನಿಗಳ ಲೂಟಿಗಾಗಿ ಅಲ್ಲ. ಬ್ಯಾಂಕಿಂಗ್ ಸೌಲಭ್ಯಗಳು ನಾಗರಿಕರ ಮೂಲ ಹಕ್ಕಾಗಬೇಕು ಎಂಬ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಉಳಿವಿಗಾಗಿ ಹೋರಾಟ ನಿರಂತರವಾಗಿ ಇರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಚಿತ್ರದುರ್ಗ ಜಿಲ್ಲಾ ನಿವೃತ್ತ ಬ್ಯಾಂಕ್ ನೌಕರರ ಒಕ್ಕೂಟದ ಉಪ ಪ್ರಧಾನ ಕಾರ್ಯದರ್ಶಿ ಎಚ್. ಸೂಗೂರಪ್ಪ, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ, ಉಪಾಧ್ಯಕ್ಷರಾದ ಎಂ.ಎಂ.ಸಿದ್ದಲಿಂಗಯ್ಯ, ಆರ್.ಆಂಜನೇಯ, ಜಂಟಿ ಕಾರ್ಯದರ್ಶಿಗಳಾದ ಸಿ.ಪರಶುರಾಮ, ಎಂ.ಡಿ.ವಿದ್ಯಾಸಾಗರ್, ಎನ್.ವಿ. ಶ್ರೀನಿವಾಸ, ಡಿ.ಎನ್.ಅಣ್ಣಪ್ಪ ನಂದಾ ಇತರರಿದ್ದರು.
---