ಜಿಲ್ಲೆ

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪಟ್ಟು, ಧರಣಿ ಎಚ್ಚರಿಕೆ

ದಾವಣಗೆರೆ: ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಶೀಘ್ರ ಭೂಮಿ ಪೂಜೆ ನೆರವೇರಿಸಬೇಕು. ಇಲ್ಲವಾದಲ್ಲಿ ಏ.1ರಿಂದ ಹೋರಾಟ ಅನಿವಾರ್ಯ ಎಂದು ಸ್ವಾಭಿಮಾನಿ ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಹೋರಾಟ ಸಮಿತಿ ಮುಖಂಡ ಆಲೂರು ನಿಂಗರಾಜ್ ಎಚ್ಚರಿಕೆ ನೀಡಿದರು.

2009ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಬಿಡುಗಡೆ ಮಾಡಿದ್ದರು. ಸ್ಥಳದ ಅಪಸ್ವರದ ನೆಪದಲ್ಲಿ ಭವನ 16 ವರ್ಷದಿಂದ ನಿರ್ಮಾಣವಾಗಿಲ್ಲ. ಅಂಬೇಡ್ಕರ್ ಜಯಂತಿ ವೇಳೆಗೆ ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರು 6 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ನಡೆಸಿದ ಹೋರಾಟದ ಫಲವಾಗಿ ಮಂಜೂರಾತಿ ಸಿಕ್ಕಿದೆ. ದಲಿತ ಮುಖಂಡರ ನಡುವಿನ ಭಿನ್ನಮತ ನೆಪವಾಗಿ ಇಟ್ಟುಕೊಂಡು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷೃ ತೋರುವುದು ಸರಿಯಲ್ಲ ಎಂದರು.

ರಾಷ್ಟ್ರೀಯ ಹೆದ್ದಾರಿ 48 ಸಮೀಪದ ಪ್ರವಾಸಿ ಮಂದಿರದ ಬಳಿ ಅಂಬೇಡ್ಕರ್ ಭವನಕ್ಕೆ ಸ್ಥಳ ಗುರುತಿಸಲಾಗಿದೆ. ಇಲ್ಲಿಯೇ ಭವನ ನಿರ್ಮಿಸಿದರೆ ಅನುಕೂಲವಾಗಲಿದೆ. ಹಳೆ ದಾವಣಗೆರೆ ಭಾಗದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು. ಇಲ್ಲವಾದರೆ ನಗರಪಾಲಿಕೆ ಎದುರು ಏ.1ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಹೋರಾಟ ಸಮಿತಿ ಮುಖಂಡರಾದ ಶಾಮನೂರು ರಾಜು, ಅಂಜಿನಪ್ಪ, ಎಂ.ಹರೀಶ್, ದುರುಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.

--