ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದಿಂದ ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ನ.24ರಂದು ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಬಸವರಾಜು ಹೇಳಿದರು.
ಅಂದು ಬೆಳಗ್ಗೆ 10.30ಕ್ಕೆ ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಎಂಐಟಿ ಪ್ರಾಚಾರ್ಯ ಎಂ.ಬಿ. ಸಂಜಯ್ ಪಾಂಡೆ, ಎಂಬಿಎ ವಿಭಾಗದ ನಿರ್ದೇಶಕ ಡಾ. ಬಿ. ಬಕ್ಕಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಎಂಐಟಿ ಎಂಬಿಎ ವಿಭಾಗವು 2008 ರಲ್ಲಿ ಪ್ರಾರಂಭವಾಗಿದ್ದು, ಇದುವರೆಗೂ 15 ಬ್ಯಾಚ್‌ಗಳಿಂದ ಸುಮಾರು 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಕೆಲವರು ಸ್ವಂತ ಉದ್ಯಮ ಸ್ಥಾಪಿಸಿದ್ದರೆ, ಇನ್ನೂ ಹಲವರು ವಿವಿಧ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದರು.
ಕಾಲೇಜಿನಿಂದ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳು ಹಲವು ಕಂಪನಿಗಳಿಗೆ ಆಯ್ಕೆಯಾಗುತ್ತಿದ್ದು, ಶೇ.100 ಪ್ಲೇಸ್‌ಮೆಂಟ್ ಒದಗಿಸುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಎಂಬಿಎ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಐ. ವಿನಯ್, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಪ್ರೊ.ಟಿ.ಆರ್. ತೇಜಸ್ವಿ ಕಟ್ಟಿಮನಿ ಸುದ್ದಿಗೋಷ್ಠಿಯಲ್ಲಿದ್ದರು.